ಬೆಂಗಳೂರು:ಕೋವಿಡ್ ಜೊತೆಗೆ ರಾಜ್ಯದ ಜನರುಮಳೆಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಡೆಂಗ್ಯೂನಂತಹ ಕಾಯಿಲೆಗಳೀಗ ಪುನಃ ಸದ್ದು ಮಾಡಲು ಶುರು ಮಾಡಿವೆ. ಸಾಮಾನ್ಯವಾಗಿ ಪ್ರತೀ ವರ್ಷ ರಾಜ್ಯದಲ್ಲಿ 15-20 ಸಾವಿರ ಜನರಿಗೆ ಈ ಜ್ವರ ಕಾಣಿಸಿಕೊಳ್ಳುತ್ತಿದ್ದು, ಈಡಿ ಸೂಳ್ಳೆಯಿಂದ ಇದು ಉಲ್ಬಣಗೊಳ್ಳುತ್ತದೆ. ಮುಂಗಾರು ಆರಂಭವಾಗಿರುವ ಕಾರಣ ಮಳೆ ನೀರು ಅಥವಾ ಸಂಗ್ರಹಿಸಿದ ನೀರು, ವಾರಗಟ್ಟಲೆ ಮನೆಯಲ್ಲಿಯೇ ನೀರಿನ ಶೇಖರಣೆ, ಗಿಡಗಳ ಕುಂಡ, ಎಸೆದ ಟೈರ್, ಹಳೆಯ ಡ್ರಮ್, ತೊಟ್ಟಿಯಲ್ಲಿ ನಿಂತಿರುವ ನೀರಿನ ಜಾಗದಲ್ಲಿ ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿ ಹೆಚ್ಚಾಗಲಿದೆ.
ಹೀಗಾಗಿ, ಜನರು ಕೊರೊನಾ ಸಂದರ್ಭದಲ್ಲಿ ಹೇಗೆ ಮುನ್ನೆಚ್ಚರಿಕೆ ಜಾಗ್ರತೆಯನ್ನು ವಹಿಸಿದ್ದರೋ ಹಾಗೆಯೇ ಡೆಂಗ್ಯೂ ಬಗ್ಗೆಯೂ ಸ್ವಚ್ಛತೆ ಕಾಪಾಡುವ ಅವಶ್ಯಕತೆ ಇದೆ.
ಏಡಿಸ್ ಈಜಿಪ್ಟಿ ಸೊಳ್ಳೆಯಿಂದ ಹರಡುವ ಡೆಂಗ್ಯೂ:
ಏಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ಹರಡುವ ಸೋಂಕು ಡೆಂಗ್ಯೂ. ಈ ಸೊಳ್ಳೆ ನಿಂತಿರುವ ಶುದ್ಧ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಹೆಚ್ಚು ಮಾಡುತ್ತದೆ. ಇದು ಇತರೆ ಜ್ವರದಂತೆ ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಬದಲಿಗೆ ಹಗಲು ಹೊತ್ತಿನಲ್ಲಿ ಕಚ್ಚುವ ಏಡಿಸ್ ಈಜಿಪ್ಟಿ ಸೊಳ್ಳೆಯಿಂದ ಡೆಂಗ್ಯೂ ಕಾಣಿಸಿಕೊಳ್ಳುತ್ತದೆ. ಹೀಗೆ ಡೆಂಗ್ಯೂ ಬಂದ ವ್ಯಕ್ತಿಯಲ್ಲಿ ಪ್ರತಿ ಎಂಎಲ್ ರಕ್ತದಲ್ಲಿ ಪ್ಲೇಟೆಟ್ ಸಂಖ್ಯೆ ಕಡಿಮೆ ಆಗುತ್ತಾ, ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಯಿದೆ.
ಡೆಂಗ್ಯೂ ಜ್ವರದ ಲಕ್ಷಣಗಳೇನು?
- ತೀವ್ರ ಜ್ವರ ಕಾಣಿಸಿಕೊಳ್ಳುವುದು.
- ತಲೆ ನೋವು ಹಾಗೂ ಹಣೆಯ ಮುಂಭಾಗದಲ್ಲಿ ನೋವು ಬರುವುದು.
- ಮೈ-ಕೈ ನೋವು, ಕೀಲು ನೋವಾಗುವುದು.
- ವಾಂತಿ, ಭೇದಿ, ಆಲಸ್ಯ ಉಂಟಾಗುವುದು.