ಬೆಂಗಳೂರು: ಅಸಮಾಧಾನಗೊಂಡಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಇಂದು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಂಗಳವಾರ ಸತೀಶ್ ಜಾರಕಿಹೊಳಿ ಬೆಂಗಳೂರು ಸರ್ಕಾರಿ ನಿವಾಸಕ್ಕೆ ತೆರಳಿದ ಡಿಕೆ ಶಿವಕುಮಾರ್, ಕೆಲ ಹೊತ್ತು ಮಾತುಕತೆ ನಡೆಸಿದರು. ಇಬ್ಬರ ನಡುವಿನ ಪರಸ್ಪರ ಭೇಟಿ ಮಹತ್ವ ಪಡೆದುಕೊಂಡಿದೆ. ಆ ಮೂಲಕ ಡಿಸಿಎಂ ಡಿಕೆಶಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ಮುಂದಾಗಿದ್ದಾರೆ.
ಬೆಳಗಾವಿ ರಾಜಕೀಯ ವಿಚಾರದಲ್ಲಿ ಡಿಕೆ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಅಸಮಾಧಾನ ಸ್ಫೋಟಗೊಂಡಿತ್ತು. ಇದೇ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರೊಂದಿಗೆ ವಿದೇಶ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಜಾರಕಿಹೊಳಿ ಮುಂದಾಗಿದ್ದರು. ಬಳಿಕ ಹೈಕಮಾಂಡ್ ಮಧ್ಯಪ್ರವೇಶದಿಂದ ಆ ಯೋಚನೆಯನ್ನು ಕೈ ಬಿಟ್ಟಿದ್ದರು. ಬಳಿಕ ಡಾ. ಜಿ.ಪರಮೇಶ್ವರ್ ಮೂಲಕ ಸತೀಶ್ ಜಾರಕಿಹೊಳಿ ಸಮಾಧಾನ ಪಡಿಸಲು ಯತ್ನಿಸಲಾಗಿತ್ತು.
ಇದೀಗ ದಿಢೀರ್ ಆಗಿ ಡಿ.ಕೆ. ಶಿವಕುಮಾರ್ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ಭೇಟಿ ನೀಡದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಬ್ಬರು ನಾಯಕರು ಕೆಲ ಹೊತ್ತು ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಭೇಟಿ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸದ್ಯಕ್ಕೆ ಡಿಸಿಎಂ ಜೊತೆ ಸಮಸ್ಯೆ ಇಲ್ಲ. ನಮ್ಮ ಜಿಲ್ಲೆಯಲ್ಲಿ ಒಂದಷ್ಟು ಸಮಸ್ಯೆ ಇವೆ. ಅವುಗಳನ್ನು ಬಗೆಹರಿಸಿಕೊಳ್ಳುತ್ತೇವೆ. ದಿನಾ ಒಂದು ಸಮಸ್ಯೆ ಉದ್ಭವ ಆಗುತ್ತಾನೆ ಇರುತ್ತವೆ. ರಾಜಕೀಯವಾಗಿ ಸಮಸ್ಯೆ ಇರುತ್ತೆ ಎಲ್ಲ ಜಿಲ್ಲೆಯಲ್ಲಿ ಈ ಸಮಸ್ಯೆ ಇದೆ. ಹಿಂದೆ ಬಿಜೆಪಿ ಇದ್ದಾಗಲೂ ಸಮಸ್ಯೆ ಬೆಳಗಾವಿಯಲ್ಲಿ ಇತ್ತು. ಈಗಲೂ ಸಮಸ್ಯೆ ಇದ್ದೆ ಇದೆ ಎಂದರು.
ಮುಂದುವರೆದು, ನಾನು ಕೆಪಿಸಿಸಿ ಅಧ್ಯಕ್ಷರ ರೇಸ್ನಲ್ಲಿ ಇಲ್ಲ. ಸದ್ಯ ಇರುವ ಜವಾಬ್ದಾರಿ ಸಾಕಾಗಿದೆ. ಮುಂದೆ ದೊಡ್ಡ ಜವಾಬ್ದಾರಿ ನೋಡೋಣ. ಚುನಾವಣೆ ಆದಮೇಲೆ ಹೈಕಮಾಂಡ್ ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ. ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬೇಡ ಎಂದರು. ಬೆಂಗಳೂರು ಟನಲ್ ನಿರ್ಮಾಣ ವಿಚಾರವಾಗಿ ಚರ್ಚೆ ನಡೆಯಿತಾ ಎಂಬ ಪ್ರಶ್ನೆಗೆ ಟನಲ್ ವಿಚಾರವಾಗಿ ನಾವು ಚರ್ಚೆ ಮಾಡಿಲ್ಲ. ಟನಲ್ ಯಾವ ಇಲಾಖೆ ನಿರ್ಮಾಣ ಮಾಡಬೇಕು ಅಂತ ಸಿಎಂ ನಿರ್ಧಾರ ಮಾಡುತ್ತಾರೆ. ಇನ್ನೂ ಈ ವಿಚಾರ ಚರ್ಚೆಗೆ ಬಂದಿಲ್ಲ. ಕ್ಯಾಬಿನೆಟ್ನಲ್ಲಿ ಚರ್ಚೆಗೆ ಬರಬೇಕಿದೆ. ಈ ಟನಲ್ ವಿಚಾರವಾಗಿ ನನಗೆ ಡಿಕೆಶಿ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.
ಒಳಮೀಸಲಾತಿ ವಿಚಾರದಲ್ಲಿ ಸಚಿವ ಕೆ.ಹೆಚ್. ಮುನಿಯಪ್ಪ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೀದಿಗೆ ಇಳಿಯೋ ಅವಶ್ಯಕತೆ ಇಲ್ಲ. ಸರ್ಕಾರ ಇತ್ಯರ್ಥ ಮಾಡುತ್ತದೆ. ನ್ಯಾಯ ಕೊಡಿಸುವ ಕೆಲಸ ಮಾಡುತ್ತದೆ. ಸಮುದಾಯ, ಮಂತ್ರಿ ಇದ್ದಾಗ ಎರಡೂ ಕಡೆ ಇರಬೇಕಾಗುತ್ತದೆ. ಅದರ ಅರ್ಥ ಸರ್ಕಾರದ ವಿರುದ್ಧ ಎಂದು ಭಾವಿಸಬೇಕಿಲ್ಲ. ನಮ್ಮ ಮನೆಗೂ ಮುತ್ತಿಗೆ ಹಾಕಲಿ, ಊಟ ರೆಡಿ ಇರುತ್ತದೆ. ನಾವು ಅವರ ಜೊತೆಗೆ ಒಂದು ಗಂಟೆ ಕುಳಿತುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ:ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ... ನನ್ನ ಮೌನ ದೌರ್ಬಲ್ಯವಲ್ಲ: ಸಚಿವ ಸತೀಶ್ ಜಾರಕಿಹೊಳಿ