ಬೆಂಗಳೂರು :ಸಂಸದ ತೇಜಸ್ವಿ ಸೂರ್ಯ ಹಾಗೂ ಇತರೆ ಬಿಜೆಪಿ ನಾಯಕರು ಐಸಿಯು ಹಾಸಿಗೆಗಳನ್ನು ಬ್ಲಾಕ್ ಮಾಡುವ ದಂಧೆ ವಿರುದ್ಧ ದನಿ ಎತ್ತಿದ್ದನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ವಾಗತಿಸಿದ್ದಾರೆ.
ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿರುವ ಅವರು, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಮಣ್ಯ ಮತ್ತು ಉದಯ್ ಗರುಡಾಚಾರ್ ಅವರು ಪಕ್ಷದ ಸರ್ಕಾರ ಮತ್ತು ನಿಗಮದಿಂದ ಹಾಸಿಗೆ ಹಂಚಿಕೆಯಲ್ಲಿ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ.
ಬಿಬಿಎಂಪಿ ಯಾರ ನಿಯಂತ್ರಣದಲ್ಲಿದೆ? ತುಂಬಾ ತೊಂದರೆ ಅನುಭವಿಸುತ್ತಿರುವ ಜನರಿಗೆ ಜವಾಬ್ದಾರಿಯುತ ಬಿಜೆಪಿ ಸಚಿವರನ್ನು ಅವರು ತಕ್ಷಣ ಹೆಸರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಂದು ವಿಧಾನಸೌಧಕ್ಕೆ ಭೇಟಿ ನೀಡಿದ್ದ ಬಿಜೆಪಿ ಮುಖಂಡರು, ಅಕ್ರಮವಾಗಿ ಐಸಿಯು ಬೆಡ್ ಬ್ಲಾಕ್ ದಂಧೆಯನ್ನು ಬಯಲಿಗೆಳೆದಿದ್ದರು.
ಇದಾದ ಬಳಿಕ ಮುಖ್ಯ ಕಾರ್ಯದರ್ಶಿಗಳು, ಗೃಹ ಸಚಿವರು ಈ ಬಗ್ಗೆ ಇನ್ನೂ ಚರ್ಚೆ ನಡೆಸ್ತಿದ್ದಾರೆ. ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದರು. ಬೆಡ್ ಅವ್ಯವಹಾರದ ಬಗ್ಗೆ ತಕ್ಷಣ ಕ್ರಮಕ್ಕೆ ಸೂಚನೆ ನೀಡಲಾಗಿದೆ.
1 ಗಂಟೆಗಳ ಕಾಲ ಇದೇ ವಿಚಾರ ಚರ್ಚೆ ಮಾಡಿದ್ದೇನೆ. ಯಾವುದೇ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸಂಸದರು ಹಾಗೂ ಬಿಜೆಪಿ ಶಾಸಕರು ಸಿಎಂ ಕಣ್ಣುತೆರೆಸುವ ಕಾರ್ಯ ಮಾಡಿದ್ದಕ್ಕೆ ಡಿಕೆಶಿ ಅಭಿನಂದನೆ ಸಲ್ಲಿಸಿದ್ದಾರೆ.