ಬೆಂಗಳೂರು:ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಸಾಕಷ್ಟು ಮಾಹಿತಿ ಇದೆ. ಇದರಿಂದಲೇ 15 ದಿನದ ಬಳಿಕ ಸಿಎಂ ಯಡಿಯೂರಪ್ಪ ಅವರ ಪದತ್ಯಾಗದ ಕುರಿತು ತಿಳಿಸಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರಾಜರಾಜೇಶ್ವರಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಜ್ಞಾನ ಇದೆ. ನಮ್ಮ ಪಾರ್ಟಿ ಬಿಟ್ಟು ಹೋದವರೆಲ್ಲಾ ಏನೇನು ಮಾತನಾಡಿದ್ದಾರೋ ಗೊತ್ತಿಲ್ಲ. ಅನೇಕ ಶಾಸಕರು, ಮಂತ್ರಿಗಳು ಈ ಬಗ್ಗೆ ಮಾತನಾಡುತ್ತಾ ಇದ್ದಾರೆ. ಆ ಹಿನ್ನೆಲೆಯಲ್ಲಿ ನಾನೇನು ವ್ಯಾಖ್ಯಾನ ಮಾಡೋಲ್ಲ. ಮೊದಲು ಎಲೆಕ್ಷನ್ ಮಾಡೋಣ. ಚುನಾವಣೆ ಮುಗಿದ ಮೇಲೆ ನೋಡೋಣ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ವಿಚಾರ ಕುರಿತು ಮಾತನಾಡಿದ ಡಿಕೆಶಿ, ಹೌದ್ರಿ ಅವರು ರಕ್ತನೇ ಕಾಂಗ್ರೆಸ್, ತಾಯಿನೇ ಕಾಂಗ್ರೆಸ್ ನನ್ನ ಉಸಿರೇ ಕಾಂಗ್ರೆಸ್ ಅಂತಾ ಹೇಳಿರಲಿಲ್ವಾ? ಡಿ.ಕೆ ಶಿವಕುಮಾರೇ ಸಿಎಂ ಆಗ್ತಾರೆ ಅಂದಿದ್ರು. ಈಗ ಡಿ.ಕೆ ಶಿವಕುಮಾರ್ ಹಿಂದೆ ಯಾರು ಇಲ್ಲ ಅಂತಿದ್ದಾರೆ. ಹೌದು ನನ್ನ ಹಿಂದೆ ಯಾರೂ ಇಲ್ಲ, ನಾನು ಹುಟ್ಟುವಾಗ ಒಬ್ಬನೇ ಸಾಯೋವಾಗ ಇರೋದು ಒಬ್ಬನೇ. ಅವರು ನಿರ್ಮಾಪಕರಾಗಿದ್ದವರು ಈಗ ನಟರಾಗಿದ್ದಾರೆ ಅಷ್ಟೇ. ಮುನಿರತ್ನ ಬಗ್ಗೆ ಹಿಂದೆ ಮೋದಿ ಮಾತನಾಡಿದ್ರು, ಯಡಿಯೂರಪ್ಪ ಮಾತನಾಡಿದ್ರು. ಮೊದಲು ಅದನ್ನ ಸಮರ್ಥನೆ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಪಕ್ಷ ಸೇರ್ಪಡೆ:ಪ್ರೊಫೆಸರ್ ಸಿದ್ದರಾಜು ಹಾಗೂ ಬೆಂಬಲಿಗರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂಗಳೂರಿನ ರಾಜರಾಜೇಶ್ವರಿನಗರ ಬಿಇಎಂಎಲ್ ಲೇಔಟ್ನ ಸಿದ್ದರಾಜು ಅವರ ನಿವಾಸಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಸಿದ್ದರಾಜು ಹಾಗೂ ಬೆಂಬಲಿಗರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡರು.