ಕರ್ನಾಟಕ

karnataka

ETV Bharat / state

ರಘುನಾಥ್ ನಾಯ್ಡು ಜತೆ ಡಿ ಕೆ ಸುರೇಶ್​ ಸಹ ನಾಮಪತ್ರ ಸಲ್ಲಿಕೆ : ಡಿಕೆ ಶಿವಕುಮಾರ್ - ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ರಘುನಾಥ ನಾಯ್ಡು ಮತ್ತು ಡಿ ಕೆ ಸುರೇಶ್ ಇಬ್ಬರೂ ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ಹೈಕಮಾಂಡ್ ನಿರ್ಧಾರದ ಬಳಿಕ ಅಂತಿಮವಾಗಿ ಯಾರು ಕಣದಲ್ಲಿ ಉಳಿಯುತ್ತಾರೆ ಅನ್ನೋದು ತಿಳಿಯಲಿದೆ ಅಂತಾ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

dk shivakumar
ಡಿಕೆ ಶಿವಕುಮಾರ್

By

Published : Apr 19, 2023, 1:01 PM IST

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿಕೆ ಶಿವಕುಮಾರ್​

ಬೆಂಗಳೂರು: ಪದ್ಮನಾಭನಗರದಿಂದ ಇಂದು ಕಾಂಗ್ರೆಸ್ ಅಭ್ಯರ್ಥಿಗಳಾಗಿ ರಘುನಾಥ ನಾಯ್ಡು ಹಾಗೂ ಸಂಸದ ಡಿ ಕೆ ಸುರೇಶ್ ಇಬ್ಬರಿಂದಲೂ ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಸದ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಸ್ತಾರೆ. ರಘುನಾಥ ನಾಯ್ಡು ಮತ್ತು ಡಿಕೆ ಸುರೇಶ್ ಇಬ್ಬರಿಂದಲೂ ಇಂದು ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಿದ್ದೇವೆ. ಹೈಕಮಾಂಡ್ ನಿರ್ಧಾರದ ಬಳಿಕ ಅಂತಿಮವಾಗಿ ಕಣದಲ್ಲಿ ಉಳಿಯುವವರು ಯಾರು ಎನ್ನುವುದನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ.

ರಘುನಾಥ ನಾಯ್ಡು ನಮ್ಮ ಅಭ್ಯರ್ಥಿ. ಅವರು ನಾಮ ಪತ್ರ ಸಲ್ಲಿಸ್ತಾರೆ. ನಾನೂ ಕೂಡ ನಾಮಪತ್ರ ಸಲ್ಲಿಕೆಗೆ ಹೋಗ್ತೇನೆ. ರಘುನಾಥ ನಾಯ್ಡುಗೆ ಗೆಲ್ಲುವಂತ ವಾತಾವರಣ ಇದೆ. ಅವರೂ ಕೂಡ ಗೆಲ್ಲುವಂತ ಅಭ್ಯರ್ಥಿ. ಬಹಳ ಜನ ಬಿಜೆಪಿಯಿಂದ ಸೇರ್ಪಡೆ ಆಗಿದ್ದಕ್ಕೆ ಕಾರ್ಪೋರೇಟರ್​ಗಳೂ ಇದ್ರು ಎಂದರು.

ಬಿ ವಿ ನಾಯಕ್ ಅವರು ಪಕ್ಷ ಬಿಟ್ಟಿರುವುದು ಗೊತ್ತಿದೆ. ಕ್ಯಾಂಡಿಡೇಟ್ ಬದಲಾಯಿಸಬೇಕು ಎಂಬ ಪ್ರಪೋಸಲ್ ನನ್ನ ತನಕ ಬಂದಿಲ್ಲ. ನಮ್ಮ ಕ್ಯಾಂಡಿಡೇಟ್ ಸ್ಟ್ರಾಂಗ್ ಆಗಿ ಇದ್ದಾರೆ. ಬಿಜೆಪಿ, ಜೆಡಿಎಸ್ ಅವರು ಚೆಸ್ ಆಟ ಆಡ್ತಿದ್ದಾರೆ, ನಾವೂ ಆಡ್ತಿದ್ದೇವೆ. ಯಾರೆಲ್ಲ ನಮ್ಮೊಂದಿಗೆ ಇದ್ದಾರೆ ಅವರ ಮೇಲೆಲ್ಲ ಐಟಿ ದಾಳಿ ನಡೆಯುತ್ತಿದೆ. ಹೆದರಿಸಿ, ಬೆದರಿಸಿ ಎಲ್ಲವೂ ಮಾಡ್ತಿದ್ದಾರೆ. ಕಾಂಗ್ರೆಸ್​ನವರನ್ನು ಹೆದರಿಸೋಕೆ ಅವರು ಏನು ಬೇಕಾದರೂ ಮಾಡಲಿ. ಅವರು ಏನೇ ಮಾಡಿದರೂ ನಾವು ರಾಜ್ಯದಲ್ಲಿ ಬದಲಾವಣೆ ತರ್ತೀವಿ ಎಂದು ಹೇಳಿದರು. ಸದಾಶಿವನಗರ ನಿವಾಸದಿಂದ ಡಿಕೆಶಿ ನೇರವಾಗಿ ಎಂಜಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ಗೆ ತೆರಳಿದರು. ಒಬ್ಬರೇ ತೆರಳಿದ ಡಿಕೆಶಿ, ಆಪ್ತರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ.

ನಾಯ್ಡು ಸಭೆ: ಪದ್ಮನಾಭನಗರದಲ್ಲಿ ರಘುನಾಥ್ ನಾಯ್ಡು ನಾಮಪತ್ರ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿದೆ. ರಘುನಾಥ್ ನಾಯ್ಡು ಜೊತೆಗೆ ಡಿ ಕೆ ಸುರೇಶ್ ನಾಮ ಪತ್ರ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ನಾಮ ಪತ್ರ ಸಲ್ಲಿಸುವುದಕ್ಕಿಂತ ಮೊದಲು ನಾಯ್ಡು ಅವರು ನಗರದ ಪುಟ್ಟಲಿಂಗಯ್ಯ ಆಟದ ಮೈದಾನದಲ್ಲಿ ಕಾರ್ಯಕರ್ತರ ಸಮಾಲೋಚನೆ ಸಭೆ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್​ ಭಾಗಿಯಾಗಿದ್ದರು. ಸಮಾಲೋಚನೆ ಸಭೆ ನಂತರ ಕಾಲ್ನಡಿಗೆ ಮೂಲಕ ಎಆರ್ ಒ ಕಚೇರಿಗೆ ತೆರಳಿದ್ದಾರೆ.

ಇದನ್ನೂ ಓದಿ :ಕ್ಷೇತ್ರ ತ್ಯಾಗಕ್ಕೆ ಸಿದ್ದರಾದ ರಘುನಾಥ ನಾಯ್ಡು; ಡಿ.ಕೆ.ಸುರೇಶ್‌ಗಾಗಿ ಪದ್ಮನಾಭನಗರ ಬಿಟ್ಟು ಕೊಡುವ ಭರವಸೆ

ರೋಡ್​ ಶೋ ಆರಂಭ: ಪದ್ಮನಾಭನಗರದಲ್ಲಿ‌ ರಘುನಾಥ್ ನಾಯ್ಡು ರೋಡ್ ಶೋ ಆರಂಭವಾಗಿದೆ. ನೂರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸುತ್ತಿದ್ದಾರೆ. ನಗರದ ಕೀಮ್ಸ್ ಕಾಲೇಜು ಹಿಂಭಾಗದಲ್ಲಿರುವ ಎ ಆರ್ ಒ ಕಚೇರಿಗೆ ಹೊರಟ ರಘುನಾಥ್ ನಾಯ್ಡುಗೆ ಕಾರ್ಯಕರ್ತರು ವಿವಿಧ ವಾದ್ಯಗಳ ಮೂಲಕ ಬೆಂಬಲ ಸೂಚಿಸಿದ್ದಾರೆ. ಭರ್ಜರಿ ಮೆರವಣಿಗೆ ಮೂಲಕ ನಾಯ್ಡು ನಾಮಪತ್ರ ಸಲ್ಲಿಸಲು ಕೇಂದ್ರದತ್ತ ಪ್ರಯಾಣ ಬೆಳೆಸಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷರ ಸೂಚನೆಗೆ ಕಾಯುತ್ತಿದ್ದೇನೆ: ಸಂಸದ ಡಿ ಕೆ ಸುರೇಶ್ ಮಾತನಾಡಿ, "ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೂಚನೆಗಾಗಿ ಕಾಯ್ತಿದ್ದೇನೆ. ಚರ್ಚೆಗಳು ನಡೆಯುತ್ತಿವೆ. ರಘುನಾಥ್​ ನಾಯ್ಡು ಕೂಡ ನನ್ನ ಆಹ್ವಾನ ಮಾಡಿದ್ದಾರೆ. ನಾನು ಕೂಡ ನಾಮಿನೇಷನ್ ಫೈಲ್ ಮಾಡಬೇಕು ಅಂತ ಹೇಳಿದ್ದಾರೆ. ಎಲ್ಲಿಗೆ ಹೋಗಬೇಕು ಗೊತ್ತಿಲ್ಲ. ಪಕ್ಷದ ವರಿಷ್ಠರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ರಾಜಕಾರಣದ ಲೆಕ್ಕಾಚಾರ ಒಂದಿಷ್ಟು ಆಗಿದೆ. ನನಗೆ ಅಶೋಕ್ ಅವರ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ನಮ್ಮ ಪಕ್ಷ ಮತ್ತು ಕಾರ್ಯಕರ್ತರ ಆದೇಶ ಬಹಳ ಮುಖ್ಯ ಆಗುತ್ತದೆ " ಎಂದಿದ್ದಾರೆ.

ನೋ ಡ್ಯೂ ಸರ್ಟಿಫಿಕೇಟ್ ದೆಹಲಿಯಿಂದ ಬೇಕಾಗುತ್ತದೆ, ತರಿಸಿಕೊಂಡಿದ್ದೇನೆ. ಎಲ್ಲಾ ವ್ಯವಸ್ಥೆ ಆಗ್ತಾ ಇದೆ. ಅಭ್ಯರ್ಥಿ ಬದಲಾವಣೆಗೆ ನಾಳೆ ಮಧ್ಯಾಹ್ನ ಮೂರು ಗಂಟೆ ತನಕ ಅವಕಾಶ ಇರುತ್ತದೆ. ಗುರುವಾರ ಗ್ರಹಣ, ಅಮಾವಾಸ್ಯೆ ಇರುವುದರಿಂದ ಕಾಲ ಚೆನ್ನಾಗಿದೆ ಅಂತ ಹೇಳಿದ್ದಾರೆ. ಮಂಡ್ಯದಿಂದ ಸ್ಪರ್ಧೆಯಾ? ಎಂಬ ಬಗ್ಗೆಯೂ ಮಾಹಿತಿ ಇಲ್ಲ. ನನ್ನ ಕ್ಷೇತ್ರದಲ್ಲಿಯೇ ಅನೇಕರು ನಿಂತುಕೊಳ್ಳಿ ಅಂತಾ ಹೇಳಿದ್ದಾರೆ. ವೈಯಕ್ತಿಕವಾಗಿ ಚುನಾವಣೆಗೆ ನಿಲ್ಲುವ ಮನಸ್ಸಿಲ್ಲ. ಆದರೆ, ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯ ಮುಖ್ಯ. ಡಿಕೆಶಿ ಹೇಳಿದ ಹಾಗೆ ಶುಭ ಘಳಿಗೆ, ಶುಭ ಸಮಯದಲ್ಲಿ ಎಲ್ಲವೂ ನಡೆಯುತ್ತಿರುತ್ತದೆ. ಏನೇ ತೀರ್ಮಾನ ತೆಗೆದುಕೊಂಡರೂ ಇಂದು ರಾತ್ರಿ, ನಾಳೆಯೊಳಗೆ ತೆಗೆದುಕೊಳ್ಳಬೇಕು ಎಂದರು.

ABOUT THE AUTHOR

...view details