ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಥಮ ವರ್ತಮಾನ ವರದಿ (ಎಫ್ಐಆರ್) ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ಇಂದೂ ಕೂಡ ನಡೆಯಲಿದೆ. ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ, ಡಿಕೆಶಿ ಪರ ಸುದೀರ್ಘ ವಾದ ಆಲಿಸಿದ್ದು, ಸಿಬಿಐ ವಾದ ಆಲಿಸಲು ಶುಕ್ರವಾರಕ್ಕೆ ಮುಂದೂಡಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ ಚೌಟಾ ವಾದ ಮಂಡಿಸಿ, ಅರ್ಜಿದಾರರ ಕುಟುಂಬದ ಸದಸ್ಯರ ಆದಾಯ, ಖರ್ಚು-ವೆಚ್ಚಗಳನ್ನು ಡಿಕೆಶಿ ಲೆಕ್ಕಕ್ಕೆ ಸೇರಿಸುವ ಮೂಲಕ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಭ್ರಷ್ಟಾಚಾರ ನಿಷೇಧ ಕಾಯಿದೆಯ ಸೆಕ್ಷನ್ 17 ಗಳಿಕೆ ಮೀರಿದ ಆಸ್ತಿಗೆ ಸಂಬಂಧಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಗಿಂತ ಕೆಳಗಿನವರಲ್ಲದ ಅಧಿಕಾರಿ ಆದೇಶ ಮಾಡಬೇಕು. ಈ ಆದೇಶ ಎಫ್‌ಐಆರ್‌ನಲ್ಲಿ ಕಾಣಿಸುತ್ತಿಲ್ಲ ಎಂದು ಪೀಠಕ್ಕೆ ವಿವರಿಸಿದರು. ಆದಾಯ ಮೀರಿದ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸುವಾಗ ಅವರ ಕುಟುಂಬ ಸದಸ್ಯರ ಆದಾಯವನ್ನು ಸೇರಿಸಲಾಗದು. ಇದು ಬೇನಾಮಿ ಪ್ರಕರಣವಲ್ಲ. ಆದರೆ, ಸಿಬಿಐ ಕುಟುಂಬ ಸದಸ್ಯರ ಆದಾಯ ಮತ್ತು ಖರ್ಚನ್ನು ಸಾರ್ವಜನಿಕ ಸೇವಕನ ಲೆಕ್ಕಕ್ಕೆ ಹಾಕುವ ಮೂಲಕ ಇಷ್ಟು ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು.
ಇದನ್ನೂ ಓದಿ: DKS: ಕೊರೋನಾ ನಿಯಮ ಉಲ್ಲಂಘನೆ... ಡಿಸಿಎಂ ಡಿಕೆಶಿ ವಿರುದ್ಧ ದಾಖಲಾದ ಪ್ರಕರಣ ರದ್ದು