ಬೆಂಗಳೂರು: ದ್ವಿಚಕ್ರ ವಾಹನಗಳ ಯೋಜನೆ ಹತ್ತು ಮಹಾನಗರ ಪಾಲಿಕೆಗಳಿಗೆ ವಿಸ್ತರಣೆಯಾಗಿದೆ. ಒಟ್ಟು 600 ಜನರಿಗೆ ವಾಹನ ಒದಗಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 400 ಜನರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
ಇದನ್ನೂ ಓದಿ:ಪೌರಕಾರ್ಮಿಕರಿಗೆ ಸಿಗದ ಸೌಲಭ್ಯ: ಮಹದೇಶ್ವರ ಬೆಟ್ಟ ಪ್ರಾಧಿಕಾರ, ನಗರಸಭೆ ಅಧಿಕಾರಿಗಳ ವಿರುದ್ಧ ಕೋಟೆ ಶಿವಣ್ಣ ಕಿಡಿ..!
ಸಫಾಯಿ ಕರ್ಮಚಾರಿಗಳಿಗೂ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿ ಅವರ ಬದುಕಿಗೆ ಶಕ್ತಿಯನ್ನು ತುಂಬುವ, ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಬದುಕನ್ನು ನಿರಾಳ ಮಾಡುವ ಅವಶ್ಯಕತೆ ಇದೆ. ಅವರು ಮಾಡುತ್ತಿರುವ ಕೆಲಸ ಅತ್ಯಂತ ಪ್ರಮುಖವಾದದ್ದು. ನಾವು ಸೃಷ್ಟಿ ಮಾಡುವ ಕಸವನ್ನು ಪ್ರತಿನಿತ್ಯ ನಿರಂತರವಾಗಿ ದಣಿವಿಲ್ಲದೆ ಮಾಡುತ್ತಿದ್ದಾರೆ. ಆ ಕಾಯಕವನ್ನು ಗುರುತಿಸಿ ಪುರಸ್ಕರಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ವಿದೇಶದಲ್ಲಿ ಕರ್ಮಚಾರಿಗಳು ಕಾರುಗಳಲ್ಲಿ ಓಡಾಡುವುದನ್ನು ಕೇಳಿದ್ದೆವು. ಈಗ ಇದು ನಮ್ಮ ದೇಶದಲ್ಲಿಯೂ ಆಗುತ್ತಿದೆ. ಈಗ ಸ್ಕೂಟರ್ನಲ್ಲಿ ಓಡಾಡುವಂತಾಗಿದ್ದು, ಬರುವ ದಿನಗಳಲ್ಲಿ ಅವರಿಗೆ ಕಾರುಗಳನ್ನು ಒದಾಗಿಸುವಂತಾಗುವ ವಿಶ್ವಾಸವಿದೆ ಎಂದರು.