ಬೆಂಗಳೂರು: ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ಸ್ಪಷ್ಟೀಕರಣ ನೀಡಿರುವ ಕಾರಣ 9 ಅತೃಪ್ತ ಶಾಸಕರು ಇಂದು ಮತ್ತೊಂದು ರಾಜೀನಾಮೆ ಪತ್ರವನ್ನು ಸ್ಪೀಕರ್ ಕಚೇರಿಗೆ ತಲುಪಿಸುತ್ತಿದ್ದಾರೆ. ಖುದ್ದಾಗಿ ಬರುವ ಬದಲು ಕೇವಲ ಪತ್ರಗಳನ್ನಷ್ಟೇ ತಲುಪಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎನ್ನುವ ಕಾರಣಕ್ಕೆ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಸಲು 9 ಅತೃಪ್ತ ಶಾಸಕರು ಮುಂಬೈನಿಂದ ಇಂದು ಬೆಂಗಳೂರಿಗೆ ಬರಲಿದ್ದಾರೆ. ಸ್ಪೀಕರ್ ಕಚೇರಿಗೆ ತೆರಳಿ ಮತ್ತೊಮ್ಮೆ ರಾಜೀನಾಮೆ ಪತ್ರ ಕೊಡಲಿದ್ದಾರೆ ಎನ್ನಲಾಗಿತ್ತು. ಹೆಚ್. ವಿಶ್ವನಾಥ್ ಸೇರಿದಂತೆ ಉಳಿದ 8 ಶಾಸಕರು ಈ ತೀರ್ಮಾನಕ್ಕೆ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಯೋಜನೆ ಬದಲಾಗಿದ್ದು, ಖುದ್ದಾಗಿ ಆಗಮಿಸುವ ಬದಲು ಕೇವಲ ಕ್ರಮಬದ್ಧ ರೀತಿಯಲ್ಲಿ ಬರೆದ ರಾಜೀನಾಮೆ ಪತ್ರಗಳನ್ನು ಸ್ಪೀಕರ್ ಕಚೇರಿಗೆ ತಲುಪಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.