ಬೆಂಗಳೂರು:ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳ ಕ್ರಮಬದ್ಧತೆ ಸಂಬಂಧ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮಾಲೋಚನೆ ನಡೆಸಿದರು.
ಮುಂಬೈನಿಂದ ಹಿಂದಿರುಗಿದ ಮಾಜಿ ಸ್ಪೀಕರ್ ಬೋಪಯ್ಯ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಗೆ ಆಗಮಿಸಿದರು. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
9 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ಹೇಳಿಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ಶಾಸಕರು ನೀಡಿದ್ದ ರಾಜೀನಾಮೆ ಪತ್ರಗಳ ಪ್ರತಿಗಳನ್ನು ಪರಿಶೀಲನೆ ಮಾಡಿ ಹೊಸದಾಗಿ ರಾಜೀನಾಮೆ ಪತ್ರಗಳನ್ನು ಸಿದ್ದಪಡಿಸಲು ಬೋಪಯ್ಯ, ಶಾಸಕರಿಗೆ ಅಗತ್ಯ ನೆರವು ನೀಡಿದ್ದು, ಈ ಎಲ್ಲಾ ಮಾಹಿತಿಯನ್ನು ಯಡಿಯೂರಪ್ಪ ಅವರಿಗೆ ನೀಡಿದರು.
ಶಾಸಕರು ಖುದ್ದಾಗಿ ಬಂದು ಮತ್ತೊಮ್ಮೆ ರಾಜೀನಾಮೆ ಪತ್ರ ನೀಡುವ ಬದಲು ಫ್ಯಾಕ್ಸ್ ಮೂಲಕ ಸ್ಪೀಕರ್ ಕಚೇರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಎದುರು ಖುದ್ದು ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅವರು ನೇರವಾಗಿಯೇ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಸಲು ಸೂಚನೆ ನೀಡಿರುವುದಾಗಿ ಯಡಿಯೂರಪ್ಪ ಅವರಿಗೆ ಬೋಪಯ್ಯ ಮಾಹಿತಿ ನೀಡಿದರು.
ಇಂದು ಸಂಜೆ ಸ್ಪೀಕರ್ ತೀರ್ಮಾನ ಪ್ರಕಟಿಸಲೇಬೇಕಿರುವ ಕಾರಣ ರಮೇಶ್ ಕುಮಾರ್ ನಿರ್ಣಯ ನೋಡಿ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು. ಸುಪ್ರೀಂಕೋರ್ಟ್ ನಾಳೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆ ಅಂಗೀಕರಿಸಲಿದ್ದಾರೆ. ಆದರೂ ಅವರ ನಡೆ ಏನು ಎಂದು ನೋಡಿ ನಾವು ಮತ್ತೆ ನಿರ್ಧಾರ ಕೈಗೊಳ್ಳೋಣ ಎಂದು ಯಡಿಯೂರಪ್ಪ ಅವರಿಗೆ ಮಾಜಿ ಸ್ಪೀಕರ್ ಬೋಪಯ್ಯ ಹೇಳಿದ್ದಾರೆ ಎಂದು ತಿಳಿದು ಬಂದಿದೆ.