ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ನೇಮಕಾತಿ ಅಕ್ರಮಗಳ ತನಿಖೆಗೆ ಎಸ್ಐಟಿ ರಚಿಸಿವ ಬಗ್ಗೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಆ ಮೂಲಕ ಬಿಜೆಪಿ ಸರ್ಕಾರದ ಹಗರಣಗಳ ಆರೋಪಗಳನ್ನು ತನಿಖೆಗೆ ಒಳಪಡಿಸಿ ಬಿಜೆಪಿಯನ್ನು ಮತ್ತಷ್ಟು ಕಟ್ಟಿ ಹಾಕಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಎಸ್ಐಟಿ ರಚಿಸುವ ಬಗ್ಗೆ ಸಮಾಲೋಚನೆ ನಡೆದಿದೆ.
ಪಿಎಸ್ಐ ನೇಮಕಾತಿ ಅಕ್ರಮ, ವಿವಿಧ ನೇಮಕಾತಿ ಅಕ್ರಮಗಳ ತನಿಖೆಗೆ ಎಸ್ಐಟಿ ರಚನೆ ಮಾಡುವ ಬಗ್ಗೆ ಕೆಲ ಸಚಿವರು ಇಂಗಿತ ವ್ಯಕ್ತಪಡಿಸಿದ್ದಾರೆ. ಹಿಂದೆ ನಾವು ಹಗರಣಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಈಗ ತನಿಖೆ ಸೂಕ್ತವಾಗಿ ಮಾಡದಿದ್ದರೆ ಹೊಂದಾಣಿಕೆ ರಾಜಕಾರಣ ಎನ್ನುತ್ತಾರೆ. ಹೀಗಾಗಿ ತಕ್ಷಣವೇ ವಿಶೇಷ ತನಿಖಾ ತಂಡ ಮಾಡಿ ತನಿಖೆ ನಡೆಸುವಂತೆ ಕ್ಯಾಬಿನೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
ಸಂಪುಟ ಸಭೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಸಚಿವ ಕೃಷ್ಣ ಭೈರೇಗೌಡ ತನಿಖೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ. ಸಚಿವರಿಬ್ಬರ ಮಾತಿಗೆ ದಿನೇಶ್ ಗುಂಡೂರಾವ್ ಕೂಡ ದನಿಗೂಡಿಸಿದ್ದಾರೆ. ಈ ಬಗ್ಗೆ ಮುಂದಿನ ಕ್ಯಾಬಿನೆಟ್ ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ಅಕ್ರಮ, ನೇಮಕಾತಿ ಅಕ್ರಮಗಳು ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕಾಂಗ್ರೆಸ್ ಹೋರಾಟ, ಅಭಿಯಾನಗಳನ್ನೂ ನಡೆಸಿತ್ತು. ಪ್ರಮುಖವಾಗಿ ಶೇ 40 ಪರ್ಸೆಂಟ್ ಕಮಿಷನ್ ಅಕ್ರಮ, ಬಿಟ್ ಕಾಯಿನ್ ಅಕ್ರಮ, ಪಿಎಸ್ಐ ನೇಮಕಾತಿ ಅಕ್ರಮ, ಉಪನ್ಯಾಸಕ ನೇಮಕಾತಿ ಅಕ್ರಮ ಸೇರಿದಂತೆ ಹಲವು ನೇಮಕಾತಿಯಲ್ಲಿನ ಅಕ್ರಮದ ಬಗ್ಗೆ ಕಾಂಗ್ರೆಸ್ ದೊಡ್ಡ ಮಟ್ಟಿನ ಆರೋಪ ಮಾಡಿತ್ತು.