ಕರ್ನಾಟಕ

karnataka

ಸಚಿವರು-ಶಾಸಕರ ಮಧ್ಯೆ ಸಮನ್ವಯತೆಗೆ ಕಸರತ್ತು; ಸಂಜೆ ಡಿನ್ನರ್ ಮೀಟ್ ಆಯೋಜಿಸಿದ ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Oct 5, 2023, 6:46 PM IST

ಸಚಿವರು-ಶಾಸಕರ ನಡುವಿನ ಸಮನ್ವಯತೆಯ ಕೊರತೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಭೋಜನ ಕೂಟ ಏರ್ಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ತಮ್ಮ ಕಾವೇರಿ ನಿವಾಸದಲ್ಲಿ ಸಚಿವರ ಜೊತೆ ಭೋಜ‌ನ ಕೂಟ ಏರ್ಪಡಿಸಿದ್ದಾರೆ. ಸರ್ಕಾರದಲ್ಲಿ ಸಮನ್ವಯತೆ ಸಾಧಿಸುವುದು ಇದರ ಉದ್ದೇಶ. ಈ ಮೂಲಕ ಸಚಿವರ ವಿಶ್ವಾಸ ಗಿಟ್ಟಿಸಲು ಸಿಎಂ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರು ಹಾಗೂ ಸಚಿವರೊಂದಿಗೆ ಸಮನ್ವಯತೆಯ ಕೊರತೆ ಎದುರಾಗಿದೆ. ಶಾಸಕರುಗಳು ಸಚಿವರು ತಮಗೆ ಸ್ಪಂದಿಸದೇ ಇರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರಿಗೆ ಸಲಹೆ-ಸೂಚನೆಗಳನ್ನು ನೀಡಲು ಸಿಎಂ ಡಿನ್ನರ್ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿರಿಯರು ಮತ್ತು ಸಚಿವರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗುತ್ತಿದೆ. ಹೀಗಾಗಿ ಎಚ್ಚೆತ್ತ ಸಿದ್ಧರಾಮಯ್ಯ, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಡಿನ್ನರ್ ನೆಪದಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡುವ ಸರ್ಕಸ್​ ಅವರದ್ದೆಂದು ಮೂಲಗಳು ತಿಳಿಸಿವೆ.

ಎಲ್ಲಾ ಸಚಿವರಿಗೂ ಭೋಜನಕೂಟಕ್ಕೆ ಬರುವಂತೆ ಸಿಎಂ ಆಹ್ವಾನ ನೀಡಿದ್ದಾರೆ. ಅನುದಾನ ಮತ್ತು ವರ್ಗಾವಣೆ ವಿಚಾರದಲ್ಲಿ ಶಾಸಕರಿಂದ ಬೇಸರ ವ್ಯಕ್ತವಾಗುತ್ತಿದೆ. ಮೂರು ಡಿಸಿಎಂ ಹುದ್ದೆಗಳ ರಚನೆಯ ಕುರಿತಂತೆ ಸಚಿವ ರಾಜಣ್ಣ ಇತ್ತೀಚೆಗೆ ನೀಡಿರುವ ಹೇಳಿಕೆಯಿಂದ ಸರ್ಕಾರದಲ್ಲಿ ಗೊಂದಲ ಏರ್ಪಟ್ಟಿದೆ‌. ಸಚಿವರು ಶಾಸಕರ ಅಹವಾಲಿಗೆ ಸ್ಪಂದಿಸುತ್ತಿಲ್ಲ ಎಂಬ ಶಾಸಕರ ಅಸಮಾಧಾನದ ಬಗ್ಗೆ ಡಿನ್ನರ್ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಮದ್ಯದಂಗಡಿ ಹೆಚ್ಚಿಸುವ ಪ್ರಸ್ತಾಪಕ್ಕೆ ಬಿ.ಆರ್.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರ, ಗ್ಯಾರಂಟಿಯಿಂದಾಗಿ ಸರ್ಕಾರದಲ್ಲಿ ಹಣವೇ ಇಲ್ಲದಂತಾಗಿದೆ ಎಂಬ ಶಾಸಕ ಷಡಾಕ್ಷರಿ ಹೇಳಿಕೆ, ಕೆಲ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪವೂ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಭೋಜನ ಕೂಟ ಕುತೂಹಲ ಮೂಡಿಸಿದೆ.

ಇದರ ಜೊತೆಗೆ, ಶಾಮನೂರು ಶಿವಶಂಕರಪ್ಪನವರ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಹೇಳಿಕೆ, ಲೋಕಸಭೆ ಚುನಾವಣೆಯ ತಯಾರಿ, ಜಾತಿಗಣತಿ ವರದಿ ಬಿಡುಗಡೆ, ವಿವಿಧ ಇಲಾಖಾ ಕಾರ್ಯ ವೈಖರಿ ಬಗ್ಗೆ ಸಿಎಂ ಚರ್ಚೆ ನಡೆಸುವರು.

ಇದನ್ನೂ ಓದಿ:ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಆಗಲಿ: ಸಚಿವ ಸತೀಶ್ ಜಾರಕಿಹೊಳಿ

ABOUT THE AUTHOR

...view details