ಬೆಂಗಳೂರು:ಬೆಂಗಳೂರು - ಹೊಸೂರು ರಾಷ್ಟ್ರೀಯ ಹೆದ್ದಾರಿ ಕೂಡ್ಲು ಬಳಿಯ ಎಂ.ಎಸ್ ಧೋನಿ ಗ್ಲೋಬಲ್ ಶಾಲೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಗಮಿಸಿದ್ದರು. ಮೈಕ್ರೋಸಾಫ್ಟ್-ಟೆಕ್ ಆವಂತ್ ಗಾರ್ಡೆ ಸಹಯೋಗದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಡಿಜಿಟಲ್ ತಾಂತ್ರಿಕ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೆಲಕಾಲ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಧೋನಿ, ಅವರ ಪ್ರಶ್ನೆಗಳಿಗೆ ಸಲಹೆ ನೀಡಿದರು. ಮಕ್ಕಳ ಬೆಳವಣಿಗೆಯಲ್ಲಿ ಕ್ರೀಡೆ ಎಷ್ಟು ಪ್ರಾಮುಖ್ಯವಾಗಿದೆ. ನಿಮ್ಮ ಶಾಲಾ ದಿನಗಳಲ್ಲಿ ಆಟವು ನಿಮ್ಮಲ್ಲಿ ಏನೆಲ್ಲಾ ಬದಲಾವಣೆ ತಂದಿತು ಎಂದು ವಿದ್ಯಾರ್ಥಿನಿಯೊಬ್ಬರು ಎಂಎಸ್ಗೆ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಧೋನಿ, 'ನಾನು ಬಾಲ್ಯದಿಂದಲೂ ಕ್ರೀಡೆಗೆ ಬಹಳ ಒತ್ತು ನೀಡುತ್ತಿದ್ದೆ. ಕ್ರೀಡೆಯು ಜೀವನಕ್ಕೆ ಬಹಳ ಹತ್ತಿರವಾದ ಅನೇಕ ಸಂಗತಿಗಳನ್ನು ಕಲಿಸುತ್ತದೆ. ನಾನು ಶಾಲಾ ದಿನಗಳಲ್ಲಿಂದಲೇ ಅನೇಕ ಕ್ರಿಡೆಗಳಲ್ಲಿ ಭಾಗವಹಿಸಿದ್ದೇನೆ. ಅದರಲ್ಲಿನ ಸೋಲು - ಗೆಲುವುಗಳು ಜೀವನದಲ್ಲಿನ ಸವಾಲುಗಳನ್ನು ಎದುರಿಸಲು ಸ್ಫೂರ್ತಿಯಾಗುತ್ತವೆ. ಕೆಲವೊಮ್ಮೆ ಸೋತಾಗ ನಾವು ಮುಂದಿನ ಪಂದ್ಯದಲ್ಲಿ ಹೇಗೆ ಪುಟಿದೇಳಬೇಕು, ಹೇಗೆ ಯಶಸ್ಸು ಸಾಧಿಸಬೇಕು ಎಂಬುದನ್ನು ಕ್ರೀಡೆ ಕಲಿಸುತ್ತದೆ' ಎಂದರು.