ಕರ್ನಾಟಕ

karnataka

ETV Bharat / state

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ - ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಏನಿದೆ? - Centrally awarded Schemes

ರಾಜ್ಯದ ವಿವಿಧ ಇಲಾಖೆಗಳಲ್ಲಿ ಯೋಜನೆಗಳು ಕೇಂದ್ರದ ಅನುದಾನದೊಂದಿಗೆ ಜಾರಿಯಾಗುತ್ತಿದ್ದು, ಅವುಗಳಿಗೆ ನೀಡಿದ ಅನುದಾನದ ಮಾಹಿತಿ ಇಲ್ಲಿದೆ.

details-on-grants-released-by-central-and-state-governments-for-centrally-awarded-schemes
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ- ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಏನಿದೆ?

By ETV Bharat Karnataka Team

Published : Jan 10, 2024, 6:49 AM IST

ಬೆಂಗಳೂರು:2023-24 ಸಾಲಿನ ಬಜೆಟ್ ವರ್ಷದ 9 ತಿಂಗಳು ಕಳೆದಿದೆ.‌ ರಾಜ್ಯದಲ್ಲಿ ಅನುಷ್ಠಾನವಾಗುತ್ತಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಆರ್ಥಿಕ‌ ಪ್ರಗತಿ ಏನಿದೆ? ಡಿಸೆಂಬರ್​​​ವರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಿಡುಗಡೆ ಮಾಡಿದ ತಮ್ಮ ಪಾಲಿನ‌ ಹಣವೆಷ್ಟು ಎಂಬ ವರದಿ ಇಲ್ಲಿದೆ.

ರಾಜ್ಯದಲ್ಲಿ ಕೇಂದ್ರದ ಅನುದಾನದೊಂದಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. 28 ಇಲಾಖೆಗಳಲ್ಲಿ ವಿವಿಧ ಯೋಜನೆಗಳು ಕೇಂದ್ರದ ಅನುದಾನದೊಂದಿಗೆ ಜಾರಿಯಾಗುತ್ತಿವೆ. ಈ ಪೈಕಿ ಕೆಲವು ಯೋಜನೆಗಳಿಗೆ ಬಹುಪಾಲು ಕೇಂದ್ರ ಸರ್ಕಾರ ಅನುದಾನ ನೀಡಿದರೆ, ಉಳಿದ ಅನುದಾನ ರಾಜ್ಯ ಸರ್ಕಾರದ್ದಾಗಿದೆ. ಎರಡನೇ ತ್ರೈಮಾಸಿಕದವರೆಗೆ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಕಳಪೆಯಾಗಿತ್ತು.

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, 2023-24 ಸಾಲಿನ ಆರ್ಥಿಕ ವರ್ಷದ 9 ತಿಂಗಳು ಕಳೆದಿದೆ.‌ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ಕಾಂಗ್ರೆಸ್ ಸರ್ಕಾರ ಪದೇ ಪದೆ ಆರೋಪ ಮಾಡುತ್ತಿದೆ. 15 ಇಲಾಖೆಗಳಡಿಯ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಆಗಸ್ಟ್​​ವರೆಗೆ ರಾಜ್ಯ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರವೂ ಕೂಡ 15 ಇಲಾಖೆಗಳಿಗೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಒದಗಿಸಿಲ್ಲ. ‌ಇದೀಗ ಮೂರು ತ್ರೈಮಾಸಿಕ ಕಳೆದಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳ ಆರ್ಥಿಕ ಪ್ರಗತಿ ಏನಿದೆ ಎಂಬ ವರದಿ ಇಲ್ಲಿದೆ.

ಒಟ್ಟು ಅನುದಾನ ಹಂಚಿಕೆ, ಬಳಕೆ, ಪ್ರಗತಿ ವಿವರ:ಕೇಂದ್ರದ ಯೋಜನೆಗಳಿಗೆ 2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಪಾಲು 18,187.65 ಕೋಟಿ ರೂ. ಇದ್ದರೆ, ಕೇಂದ್ರ ಸರ್ಕಾರದ್ದು 16,764.87 ಕೋಟಿ ರೂ. ಇದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಒಟ್ಟು ಹಂಚಿಕೆಯಾಗಿರುವುದು 34,952.52 ಕೋಟಿ ರೂ.‌ ಡಿಸೆಂಬರ್ ಅಂತ್ಯದವರೆಗೆ ಕೇಂದ್ರದ ಯೋಜನೆಗಳ ಪ್ರಗತಿ 58% ಆಗಿದೆ. ಕಳೆದ ವರ್ಷ ಇದೇ ಅವಧಿಗೆ ಅವುಗಳ ಆರ್ಥಿಕ ಪ್ರಗತಿ 61% ಇತ್ತು.

ಕೆಡಿಪಿ ಪ್ರಗತಿ ಅಂಕಿ- ಅಂಶದಿಂದ ಪ್ರಕಾರ ರಾಜ್ಯ ಸರ್ಕಾರ ಡಿಸೆಂಬರ್​​ವರೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಪೈಕಿ 10,947 ಕೋಟಿ ರೂ. ಬಿಡುಗಡೆ ಮಾಡಿದೆ. ಡಿಸೆಂಬರ್​​ ತನಕ ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ರಾಜ್ಯ ಮಾಡಿರುವ ವೆಚ್ಚ 11,375 ಕೋಟಿ ರೂ. ತಲುಪಿದೆ. ಅಂದರೆ ರಾಜ್ಯ ಸರ್ಕಾರ ಡಿಸೆಂಬರ್​​ವರೆಗೆ ಒಟ್ಟೂ ಹಂಚಿಕೆ ಮುಂದೆ 60% ಅನುದಾನ ರಿಲೀಸ್ ಮಾಡಿದೆ. ಈ ಹಿಂದಿನ ಬಿಜೆಪಿ ಅಧಿಕಾರವಧಿಯಲ್ಲಿ ರಾಜ್ಯ ಸರ್ಕಾರ ಡಿಸೆಂಬರ್​ವರೆಗೆ 67% ಅನುದಾನ ಬಿಡುಗಡೆ ಮಾಡಿತ್ತು.

ಇತ್ತ ಕೇಂದ್ರ ಸರ್ಕಾರ ಆಗಸ್ಟ್​ವರೆಗೆ ತನ್ನ ಪಾಲಿನ ಪೈಕಿ 6,961 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಮಾಡಿರುವ ವೆಚ್ಚ 8,889 ಕೋಟಿ ರೂ. ಆಗಿದೆ. ಅದು ಒಟ್ಟು ಹಂಚಿಕೆ ಪೈಕಿ 42% ಮಾತ್ರ ಅನುದಾನ ಬಿಡುಗಡೆ ಮಾಡಿದೆ. ಅಂದರೆ ರಾಜ್ಯ ಸರ್ಕಾರಕ್ಕೆ ಹೋಲಿಸಿದರೆ ಕೇಂದ್ರವು ಕಡಿಮೆ ಅನುದಾನ ಬಿಡುಗಡೆ ಮಾಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರವು ಡಿಸೆಂಬರ್ ತನಕ 52% ಅನುದಾನ ರಿಲೀಸ್ ಮಾಡಿತ್ತು.

ಕೆಲ ಇಲಾಖೆಗಳಿಗೆ ರಾಜ್ಯ, ಕೇಂದ್ರದ ಅನುದಾನ ಬಿಡುಗಡೆ ಶೂನ್ಯ:ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೆಲ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಡಿಸೆಂಬರ್​​​ವರೆಗೆ ಒಂದು ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರ ಆಗಲಿ ಕೇಂದ್ರ ಸರ್ಕಾರ ಆಗಲಿ ಒಂದಿಷ್ಟೂ ಅನುದಾನ ಒದಗಿಸಿಲ್ಲ. ಇತ್ತ ಸಹಕಾರ ಇಲಾಖೆಗೂ ಎರಡೂ ಸರ್ಕಾರಗಳು ಈವರೆಗೆ ತನ್ನ ಪಾಲಿನ ಅನುದಾನ ನೀಡಿಲ್ಲ.

ಇತ್ತ ವೈದ್ಯಕೀಯ ಶಿಕ್ಷಣ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈವರೆಗೆ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಒಂದು ರೂಪಾಯಿ ಕೂಡ ರಿಲೀಸ್​​ ಮಾಡಿಲ್ಲ. ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರ 1.50 ಕೋಟಿ ಹಣ ಬಿಡುಗಡೆ ಮಾಡಿದ್ದರೆ, ಕೇಂದ್ರವು ಯಾವುದೇ ಅನುದಾನ ನೀಡಿಲ್ಲ. ಅಲ್ಪಸಂಖ್ಯಾತ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಎರಡೂ ಸರ್ಕಾರಗಳು ಈವರೆಗೆ ಅನುದಾನ ಕೊಟ್ಟಿಲ್ಲ. ಜಲಸಂಪನ್ಮೂಲ ಇಲಾಖೆಗಳಲ್ಲಿನ‌ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರ ಈವರೆಗೆ ತನ್ನ ಪಾಲಿನ ಪೈಕಿ 1,000 ಕೋಟಿ ಹಣ ಬಿಡುಗಡೆ ಮಾಡಿದ್ದರೆ, ಕೇಂದ್ರ ಸರ್ಕಾರ ಈವರೆಗೆ ಅನುದಾನವನ್ನೇ ರಿಲೀಸ್​​ ಮಾಡಿಲ್ಲ.

ಇದನ್ನೂ ಓದಿ:2023-24ರ ಬಜೆಟ್ ವರ್ಷದ 9 ತಿಂಗಳಲ್ಲಿ ರಾಜ್ಯದ ಇಲಾಖಾವಾರು ಆರ್ಥಿಕ ಪ್ರಗತಿ ಹೀಗಿದೆ

ABOUT THE AUTHOR

...view details