ಬೆಂಗಳೂರು:ಸಿಲಿಕಾನ್ ಸಿಟಿಯ ಪ್ರಮುಖ ವ್ಯಾಪಾರಿ ತಾಣವನ್ನು ಹೊಂದಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಹತ್ತು ಹಲವು ರೀತಿಯ ಅಭಿವೃದ್ಧಿ ಕೆಲಸಗಳ ಮೇಲೆ ಹಾಲಿ ಸಚಿವ ಅಶ್ವತ್ಥನಾರಾಯಣ ಮರು ಆಯ್ಕೆ ಬಯಸಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ನಿಂದ ಮಾಜಿ ಸಚಿವ ಎಂ.ಆರ್.ಸೀತಾರಂ ಪುತ್ರ ರಕ್ಷಾ ರಾಮಯ್ಯ, ಬಿಕೆ ಹರಿಪ್ರಸಾದ್ ಆಪ್ತ ಅನೂಪ್ ನಡುವೆ ಟಿಕೆಟ್ ಪೈಪೋಟಿ ಇದೆ. ಒಂದು ಕಾಲದಲ್ಲಿ ಜನತಾ ಪರಿವಾರದ ತೆಕ್ಕೆಯಲ್ಲಿದ್ದ ಕ್ಷೇತ್ರದಲ್ಲಿ ಈಗ ಅಭ್ಯರ್ಥಿಗೂ ಹುಡುಕಾಡುವ ಪರಿಸ್ಥಿತಿ ಜೆಡಿಎಸ್ಗೆ ಇದೆ. ಈ ಎಲ್ಲದರ ನಡುವೆ ಮಲ್ಲೇಶ್ವರ ಕ್ಷೇತ್ರದ ಸಂಪೂರ್ಣ ಚಿತ್ರಣದ ಕುರಿತ ಪಕ್ಷಿನೋಟ ಇಲ್ಲಿದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರ ಕೂಡ ಒಂದು. ಮಲ್ಲೇಶ್ವರ, ಮತ್ತಿಕೆರೆ, ಅರಮನೆ ನಗರ, ರಾಜಮಹಲ್ ಗುಟ್ಟಹಳ್ಳಿ, ಸುಬ್ರಹ್ಮಣ್ಯನಗರ, ಗಾಯತ್ರಿ ನಗರ ವಾರ್ಡ್ಗಳನ್ನು ಹೊಂದಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಇತಿಹಾಸ ಪ್ರಸಿದ್ಧ ಕಾಡುಮಲ್ಲೇಶ್ವರ ದೇವಾಲಯದಿಂದ ಹೆಸರುವಾಸಿಯಾಗಿದೆ. ಗಣಪತಿ ದೇವಸ್ಥಾನ, ಗಾಯತ್ರಿ ಮಂದಿರ, ಗಂಗಮ್ಮನಗುಡಿ, ಸರ್ಕಲ್ ಮಾರಮ್ಮ ದೇವಾಲಯಗಳ ಜೊತೆಗೆ ಉದ್ಯಾನವನಗಳಿಗೆ ಹೇಳಿ ಮಾಡಿಸಿದ ಕ್ಷೇತ್ರವಾಗಿದೆ. ಸ್ಯಾಂಕಿಕೆರೆ ಲ್ಯಾಂಡ್ ಮಾರ್ಕ್ನಂತೆ ಅಭಿವೃದ್ಧಿಯಾಗಿದೆ.
ಪ್ರಮುಖ ವ್ಯಾಪಾರಿ ತಾಣಗಳಲ್ಲಿ ಮುಂಚೂಣಿಯಲ್ಲಿರುವ ಮಲ್ಲೇಶ್ವರ ಬ್ರಾಹ್ಮಣ ಸಮುದಾಯದ ಬಾಹುಳ್ಯ ಹೊಂದಿರುವ ಕ್ಷೇತ್ರವಾಗಿದೆ. ಬ್ರಾಹ್ಮಣ ಸಮುದಾಯದ ಮತದಾರರೇ ಇಲ್ಲಿ ನಿರ್ಣಾಯಕ. ಇಡೀ ಸಮುದಾಯ ಒಟ್ಟಾಗಿ ಯಾರ ಕಡೆ ವಾಲುತ್ತದೆಯೋ ಅವರು ಅನಾಯಾಸವಾಗಿ ಇಲ್ಲಿ ಗೆಲ್ಲುತ್ತಾರೆ. ಹಾಗಾಗಿಯೇ ಕಳೆದ ಮೂರು ಬಾರಿಯೂ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಅನಾಯಾಸವಾಗಿ ಗೆಲುವುದು ಸಾಧಿಸಿ ಹ್ಯಾಟ್ರಿಕ್ ಗೆಲುವಿನ ನಂತರ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
2,22,500 ಮತದಾರರಿರುವ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಮತಗಳೇ ನಿರ್ಣಾಯಕವಾಗಿದೆ. 55 ಸಾವಿರ ಬ್ರಾಹ್ಮಣ ಮತದಾರರು, 41 ಸಾವಿರ ಒಕ್ಕಲಿಗ ಮತದಾರರು, 33,500 ಎಸ್ಸಿ-ಎಸ್ಟಿ ಮತದಾರರಿದ್ದು, 15 ಸಾವಿರ ತಮಿಳರು, 13 ಸಾವಿರ ತೆಲುಗರು, 8 ಸಾವಿರ ಮುಸ್ಲಿಂ ಸಮುದಾಯದವರು, 5 ಸಾವಿರ ಲಿಂಗಾಯತ, 5 ಸಾವಿರ ಕುರುಬರು, 4500 ಯಾದವ, 1500 ದೇವಾಂಗ, 1500 ತಿಗಳ ಸಮುದಾಯದ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳಾ ಮತದಾರರ ನಡುವಿನ ವ್ಯತ್ಯಾಸ 15 ಸಾವಿರಕ್ಕೂ ಕಡಿಮೆ ಇದೆ ಎನ್ನಲಾಗಿದೆ.
ಕ್ಷೇತ್ರದ ಇತಿಹಾಸ ನೋಡುವುದಾದರೆ 1957 ರಿಂದ 2018ರ ವರೆಗೂ ಒಟ್ಟು 14 ಚುನಾವಣೆಗಳು ನಡೆದಿವೆ. ಮೊದಲೆರಡು ಬಾರಿ ವೈಯಕ್ತಿಕ ವರ್ಚಸ್ಸಿನಿಂದಾಗಿ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರೆ, 1967 ಮತ್ತು 1972ರಲ್ಲಿ ಸಿಪಿಐ, 1978, 1983, 1985ರಲ್ಲಿ ಜನತಾ ಪಕ್ಷ, 1989, 1994ರಲ್ಲಿ ಜನತಾದಳ, 1999,2004ರಲ್ಲಿ ಕಾಂಗ್ರೆಸ್, 2008, 2013, 2018ರಲ್ಲಿ ಬಿಜೆಪಿ ಗೆದ್ದಿದೆ. ಜನತಾದಳದಿಂದ ಜೀವರಾಜ್ ಆಳ್ವ, ನಟ ಅನಂತ್ ನಾಗ್, ಕಾಂಗ್ರೆಸ್ನಿಂದ ಎಂ.ಆರ್.ಸೀತಾರಾಂ, ಬಿಜೆಪಿಯಿಂದ ಅಶ್ವತ್ಥನಾರಾಯಣ ಗೆದ್ದ ಪ್ರಮುಖರಾಗಿದ್ದಾರೆ. ಐದು ಬಾರಿ ಜನತಾ ಪರಿವಾರದ ಹಿಡಿತದಲ್ಲಿದ್ದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಜನತಾದಳಕ್ಕೆ ಹಿಡಿತವಿಲ್ಲದಂತಾಗಿದೆ. ಎರಡು ಬಾರಿ ಗೆದ್ದಿರುವ ಕಾಂಗ್ರೆಸ್ ತೀವ್ರ ಸ್ಪರ್ಧೆ ಒಡ್ಡಲು ಮುಂದಾಗಿದೆ. ಆದರೆ, 2008ರವರೆಗೂ ಕ್ಷೇತ್ರದಲ್ಲಿ ಗುರುತಿಗೇ ಇಲ್ಲದಂತಿದ್ದ ಬಿಜೆಪಿ ಕ್ಷೇತ್ರ ಮರುವಿಂಗಡಣೆಯಾದ ನಂತರ ಸತತವಾಗಿ ಮೂರು ಬಾರಿ ಗೆದ್ದು ಕ್ಷೇತ್ರವನ್ನು ಭದ್ರಕೋಟೆಯನ್ನಾಗಿ ಮಾಡಿಕೊಂಡಿದೆ.
2018ರ ಫಲಿತಾಂಶವನ್ನು ಅವಲೋಕನ ಮಾಡುವುದಾದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ 83,130 ಮತ ಪಡೆದರೆ ಎರಡನೇ ಸ್ಥಾನ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಪಡೆದಿದ್ದು ಕೇವಲ 29,130 ಮತಗಳು ಮಾತ್ರ. ಮೂರನೇ ಸ್ಥಾನ ಪಡೆದ ಜೆಡಿಎಸ್ಗೆ ಸಿಕ್ಕಿದ್ದು 7,884 ಮತಗಳು. 54 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಕಳೆದ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ ಯಡಿಯೂರಪ್ಪ ಸರ್ಕಾರ ರಚನೆ ಮಾಡಿದ ವೇಳೆ ಉಪ ಮುಖ್ಯಮಂತ್ರಿಯಾಗಿ ಸರ್ಕಾರದ ಭಾಗವಾದ ಅಶ್ವತ್ಥನಾರಾಯಣ ನಂತರ ಬೊಮ್ಮಾಯಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಮುಂದುವರೆದಿದ್ದಾರೆ.
ಮಲ್ಲೇಶ್ವರದ ಮನೆ ಮನೆಗೂ ಅಶ್ವತ್ಥನಾರಾಯಣ ತಲುಪಿದ್ದಾರೆ. ಮಲ್ಲೇಶ್ವರ ಸಹಾಯ ಆ್ಯಪ್ ಮೂಲಕ ಸ್ಥಳೀಯರ ಅಹವಾಲು ಆಲಿಸಿ ಪರಿಹಾರ ಕಲ್ಪಿಸುವ ವಿನೂತನ ಪ್ರಯತ್ನ ನಡೆಸಿದ್ದು, ನಿರುದ್ಯೋಗಿ ಯುವಕರಿಗೆ ಯೂತ್ ಎಡ್ಜ್ ಕಾರ್ಯಕ್ರಮದ ಮೂಲಕ ಉದ್ಯೋಗಕ್ಕೆ ದಾರಿ ತೋರುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಈ ಬಾರಿಯೂ ಬಿಜೆಪಿಯಿಂದ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ.