ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಆಗಮಿಸುತ್ತಿದ್ದು, ರೋಡ್ ಶೋ, ಸಾರ್ವಜನಿಕ ಸಭೆ, ಮನೆ ಮನೆ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಿಗದಿಯಾಗಿದೆ. ನಗರದ
ಮಾಗಡಿ ರಸ್ತೆ ನೈಸ್ ಜಂಕ್ಷನ್ ನಿಂದ ಸುಂಕದಕಟ್ಟೆ ತನಕ ರೋಡ್ ಶೋ ನಡೆಸಲಿರುವ ಪ್ರಧಾನಿ, ಅಂದು ರಾತ್ರಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ರಾಜಭವನದಲ್ಲಿ ವಾಸ್ತವ್ಯ ಹೂಡಲಿರುವ ಮೋದಿ ಮರುದಿನ ಅಂದರೆ ಏ.30ಕ್ಕೆ ಮೂರು ಕಡೆ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಮೊದಲು ಕೋಲಾರ ನಂತರ ಚನ್ನಪಟ್ಟಣ ಕಡೆಯದಾಗಿ ಮೈಸೂರಿನಲ್ಲಿ ನಮೋ ಭಾಷಣ ಮಾಡಲಿದ್ದಾರೆ.
ಏಪ್ರಿಲ್ 26 ಕ್ಕೆ ಮೂವರು ನಾಯಕರ ರಾಜ್ಯ ಪ್ರವಾಸ:ಏಪ್ರಿಲ್ 26ರ ಬೆಳಗ್ಗೆ ಲಕ್ನೋದಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೈಸೂರಿನಿಂದ ಮಂಡ್ಯಕ್ಕೆ ತೆರಳಿ ಮಂಡ್ಯದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ, ಮಂಡ್ಯ ಕಾರ್ಯಕ್ರಮ ಮುಗಿಸಿ ಮೈಸೂರಿಗೆ ವಾಪಸಾಗಲಿರುವ ಯೋಗಿ ಆದಿತ್ಯನಾಥ್ ಮೈಸೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿಂದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಗೆ ತೆರಳಲ್ಲಿರುವ ಅವರು ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ವಿಜಯಪುರದಲ್ಲಿ ಸಾರ್ವಜನಿಕ ಸಭೆಯನ್ನುದೇಶಿಸಿ ಮಾತನಾಡಲಿದ್ದಾರೆ. ಬಸವನಬಾಗೇವಾಡಿಯಲ್ಲಿ ಕಾರ್ಯಕ್ರಮ ನಡಸಿ ಅಲ್ಲಿಂದ ಇಂಡಿಗೆ ತೆರಳಲಿರುವ ಯೋಗಿ ಆದಿತ್ಯನಾಥ್ ಇಂಡಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಬಳಿಕ ಸಂಜೆ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಿದ್ದಾರೆ.
26 ರಂದು ಬೆಳಗ್ಗೆ ಬೆಳಗಾವಿ ಜಿಲ್ಲೆಯ ಕಾಗವಾಡಕ್ಕೆ ಆಗಮಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಗವಾಡದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವಿದ್ದಾರೆ, ನಂತರ ಜಮಖಂಡಿಗೆ ತೆರಳಿ ಅಲ್ಲಿಯೂ ಆಯೋಜನೆಯಾಗಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಮತ ಯಾಚನೆ ಮಾಡಲಿದ್ದಾರೆ.