ಬೆಂಗಳೂರು: ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಸಿಲಿಕಾನ್ ಹೊರವಲಯದ ಹಲವು ಭಾಗಗಳು ಮುಳುಗಡೆ ಆಗಿದ್ದವು. ಮಳೆಯ ಪ್ರಮಾಣ ತಗ್ಗಿ ಟ್ರಾಫಿಕ್ ಸಮಸ್ಯೆ ಸ್ವಲ್ಪ ಬಹೆಗರಿದಿದ್ದರೂ ಈಗಲೂ ಸುಮಾರು 5000 ಕುಟುಂಬಗಳಿಗೆ ತೊಂದರೆ ಸಿಲುಕಿವೆ ಎಂದು ತಿಳಿದು ಬಂದಿದೆ.
ನಗರದ ಹೊರವಲಯದ ಮಹದೇವಪುರ, ಬೆಳ್ಳಂದೂರು, ವರ್ತೂರು, ಯಮಲೂರು, ಸರ್ಜಾಪುರ, ಜುನ್ನಸಂದ್ರ, ಹಾಲನಾಯಕನಹಳ್ಳಿ, ಮಾರತಹಳ್ಳಿ, ದೊಡ್ಡನೆಕ್ಕುಂದಿ ಸೇರಿ ವಿವಿಧ ಪ್ರದೇಶಗಳಲ್ಲಿ ಒಟ್ಟು 700ಕ್ಕೂ ಹೆಚ್ಚು ಮನೆಗಳು ಮತ್ತು ಸುಮಾರು 150 ಅಪಾರ್ಟ್‌ಮೆಂಟ್‌ಗಳು ಸದ್ಯ ಪ್ರವಾಹಕ್ಕೆ ಸಿಲುಕಿವೆ. ರಕ್ಷಣಾ ಕಾರ್ಯ ಕೈಗೊಂಡು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎನ್ನಲಾಗಿದೆ.
ಪಾಲಿಕೆಯಿಂದ ಜನರಿಗೆ ಆಹಾರ ಸರಬರಾಜು:ಪ್ರವಾಹದಲ್ಲಿ ಸಿಲುಕಿಕೊಂಡ 12 ಸಾವಿರಕ್ಕೂ ಹೆಚ್ಚು ಜನರಿಗೆ ಕಳೆದ ಎರಡು ದಿನಗಳಿಂದ ವಿವಿಧ ಸಂಘ ಸಂಸ್ಥೆಗಳು, ಬಿಬಿಎಂಪಿ ಆಹಾರ ಸರಬರಾಜು ಮಾಡುತ್ತಿದೆ. ಪ್ರವಾಹದ ನೀರು ಹರಿದು ಹೋಗಲು ಅನುಕೂಲ ಆಗುವಂತೆ ತುರ್ತು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ರಾಜಕಾಲುವೆಯಲ್ಲಿ ತುಂಬಿಕೊಂಡಿರುವ ಹೂಳು ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ಗಳಿಗೆ ನೋಟಿಸ್ ಜಾರಿ:ಯಮಲೂರು ಬಳಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ ಅಪಾರ್ಟ್‌ಮೆಂಟ್ ಭಾಗವನ್ನು ತೆರವುಗೊಳಿಸಲು ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಸುಮಾರು 400 ಮೀ ಒತ್ತುವರಿ ತೆರವು ಗೊಳಿಸಲಾಗಿದೆ. ಇದರಿಂದ ಸುತ್ತಲಿನ ಪ್ರದೇಶಗಳಲ್ಲಿ ನಿಂತಿದ್ದ 4 ಅಡಿಯಷ್ಟು ನೀರು ಹರಿದು ಹೋಗಿದೆ. ಒತ್ತುವರಿ ಸ್ಥಳದಲ್ಲಿ ಗಟ್ಟಿ ಗೋಡೆಗಳನ್ನು ನಿರ್ಮಿಸಿದ್ದರಿಂದ ತೆರವು ಸವಾಲಾಗಿತ್ತು. ವೆಚ್ಚವನ್ನು ಅಪಾರ್ಟ್‌ಮೆಂಟ್ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದಿದ್ದಾರೆ.
ಮನೆಗಳ ತೆರವಿಗೆ ನೋಟಿಸ್:ಹಾಲನಾಯಕನಹಳ್ಳಿ ಕೆರೆಯ ನೀರು ಹರಿಯುವ ಪ್ರದೇಶ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ರೈನ್‌ಬೋ ಡ್ರೈವ್ ಬಡಾವಣೆಯ 32 ಮನೆಗಳನ್ನು ತೆರವುಗೊಳಿಸಲು ನೋಟಿಸ್ ಜಾರಿಗೊಳಿಸಲಾಗಿದೆ. ಮನೆಗಳ ತೆರವು ಮಾಡಿ ನೀರು ಸರಾಗವಾಗಿ ಹರಿಯಲು ದೊಡ್ಡ ಕೊಳವೆ ಮಾದರಿ ಕಾಲುವೆ ನಿರ್ಮಿಸಬೇಕಿದೆ. ಶೀಘ್ರ ಡಿಪಿಆರ್ ಸಿದ್ಧಪಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದಿದ್ದಾರೆ.