ಕರ್ನಾಟಕ

karnataka

ಐಫೋನ್‌ಗಳಿದ್ದ ಪಾರ್ಸೆಲ್ ಸಮೇತ ಡೆಲಿವರಿ ಬಾಯ್ಸ್ ಪರಾರಿ

By

Published : Mar 13, 2023, 12:29 PM IST

ಗ್ರಾಹಕರೊಬ್ಬರು ಆರ್ಡರ್​ ಮಾಡಿದ್ದ ಐದು ಐಫೋನ್​ಗಳು ಹಾಗೂ ಆ್ಯಪಲ್​ ವಾಚ್​ಗಳನ್ನು ವಿಳಾಸಕ್ಕೆ ತಲುಪಿಸದೆ ಡೆಲಿವರಿ ಬಾಯ್​ಗಳಿಬ್ಬರು ಫೋನ್​ಗಳ ಸಮೇತ ಪರಾರಿಯಾಗಿದ್ದಾರೆ.

Bengaluru
ಬೆಂಗಳೂರು

ಬೆಂಗಳೂರು: ದುಬಾರಿ ವಸ್ತುಗಳನ್ನು ಆನ್‌ಲೈನ್ ಮೂಲಕ ರವಾನಿಸುವುದು ಎಷ್ಟು ಸೇಫ್ ಎಂಬ ಪ್ರಶ್ನೆ ಮೂಡಿಸುವಂತಹ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಆರು ಐಫೋನ್‌ಗಳನ್ನು ವಿಳಾಸಕ್ಕೆ ತಲುಪಿಸದೇ ಕದ್ದೊಯ್ದಿರುವ ಆರೋಪ ಇಬ್ಬರು ಡಂಜೋ ಡೆಲಿವರಿ ಬಾಯ್ಸ್ ವಿರುದ್ಧ ಕೇಳಿ ಬಂದಿದೆ. ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರುಣ್ ಪಾಟೀಲ್ ಹಾಗೂ ನಯನ್ ಜೆ. ಎಂಬಿಬ್ಬರು ಡೆಲಿವರಿ‌ ಬಾಯ್ಸ್ ಆರು ಐಫೋನ್ ಹಾಗೂ ಆ್ಯಪಲ್ ವಾಚ್​ಗಳನ್ನು ನನ್ನ ವಿಳಾಸಕ್ಕೆ ತಲುಪಿಸದೇ ಪರಾರಿಯಾಗಿದ್ದಾರೆ ಎಂದು ತಸ್ಲೀಂ ಆರೀಫ್ ಎಂಬುವವರು ದೂರು ದಾಖಲಿಸಿದ್ದಾರೆ. ದೂರುದಾರರು ಮಾರ್ಚ್ 5ರಂದು ಸುಣಕಲ್ ಪೇಟೆಯ ಅಂಗಡಿಯೊಂದರಲ್ಲಿ ಆರು ಐಫೋನ್‌ಗಳು ಹಾಗೂ ಒಂದು ಆ್ಯಪಲ್ ವಾಚ್ ಖರೀದಿಸಿದ್ದು, ವಿಜಯನಗರದ ತಮ್ಮ ಅಂಗಡಿ ವಿಳಾಸಕ್ಕೆ ತಲುಪಿಸಲು ಡಂಜೋ ಡೆಲಿವರಿ ಆಯ್ಕೆಯ ಮೊರೆ ಹೋಗಿದ್ದರಂತೆ.

ಪಾರ್ಸಲ್ ಪಡೆದ ಅರುಣ್ ಪಾಟೀಲ್ ಎಂಬ ಡೆಲಿವರಿ ಬಾಯ್ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ತನಗೆ ಪಾರ್ಸಲ್ ಹಸ್ತಾಂತರಿಸಿದ್ದು ಶೀಘ್ರದಲ್ಲೇ ನಿಮ್ಮ ವಿಳಾಸಕ್ಕೆ ಡೆಲಿವರಿ ಕೊಡಲಾಗುವುದು ಎಂದು ಕೆಲ ಸಮಯದ ಬಳಿಕ ಕರೆ ಮಾಡಿದ್ದ ನಯನ್ ಎಂಬಾತ ತಿಳಿಸಿದ್ದಾನೆ. ಆದರೆ ಇಬ್ಬರೂ ಸಹ ಪಾರ್ಸಲ್ ವಿಳಾಸಕ್ಕೆ ತಲುಪಿಸಿಲ್ಲ. ತಸ್ಲೀಂ ಕರೆ ಮಾಡಿದಾಗ ಇಬ್ಬರೂ ಸಹ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸದ್ಯ ತಸ್ಲೀಂ ನೀಡಿರುವ ದೂರಿನನ್ವಯ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ‌ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ವಸ್ತು ಮಾರಾಟ: 11 ಮಂದಿ ಬಂಧನ

ಕೊಲೆ ಆರೋಪಿ ಸೆರೆ:ಕುಡಿದ ನಶೆಯಲ್ಲಿ ಹೆಂಡ್ತಿಯನ್ನು ಕಳುಹಿಸಿಕೊಡು ಎಂದಿದ್ದ ವ್ಯಕ್ತಿಯೋರ್ವನನ್ನು ಆಕ್ರೋಶಗೊಂಡು ಮರದ ರೀಪಿ​ನಿಂದ ಕೊಲೆಗೈದಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಭಾನುವಾರ ಸೆರೆಹಿಡಿದಿದ್ದಾರೆ. ಮಣಿಕಂಠ (43) ಎಂಬಾತನನ್ನು ಕೊಲೆಗೈದ ಆರೋಪದಡಿ ಸುರೇಶ್ ಎಂಬುವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಣಿಕಂಠ ಪ್ಲಂಬರ್ ಆಗಿ ಕೆಲಸ‌ ಮಾಡುತ್ತಿದ್ದ‌. ಅನ್ಯ ಕಾರಣಕ್ಕಾಗಿ ಹೆಂಡ್ತಿಯಿಂದ ದೂರವಾಗಿದ್ದ. ಇದೇ ತಿಂಗಳು 8 ರಂದು ಮದ್ಯ ಸೇವಿಸಿ ಮನೆಯ‌ ಪಕ್ಕದಲ್ಲಿರುವ ಆರೋಪಿ‌ ಸುರೇಶ್ ಮನೆ ಬಳಿ ಮಣಿಕಂಠ ಹೋಗಿ ಅಸಭ್ಯವಾಗಿ ಮಾತನಾಡಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ನಿನ್ನ ಹೆಂಡ್ತಿಯನ್ನು ಕಳುಹಿಸು ಎಂದಿದ್ದಾನೆ.

ಅಕ್ರೋಶಗೊಂಡ‌‌‌ ಸುರೇಶ್, ಅಲ್ಲೇ ಇದ್ದ ಮರದ‌ ರೀಪಿನಿಂದ ಹೊಡೆದಿದ್ದಾನೆ‌.‌ ಗಾಯಗೊಂಡು ಕುಸಿದು ಬಿದ್ದ ಮಣಿಕಂಠನನ್ನು ಎರಡನೇ ಮಹಡಿಯಿಂದ ಕೆಳಗೆ ಕರೆದುಕೊಂಡು ರಸ್ತೆಯಲ್ಲಿ ಮಲಗಿಸಿದ್ದಾನೆ. ಬಳಿಕ ಮಣಿಕಂಠನ ಕುಟುಂಬಕ್ಕೆ ಕರೆ ಮಾಡಿ ಕುಡಿದು ಬಿದ್ದಿರುವುದಾಗಿ ತಿಳಿಸಿದ್ದಾನೆ.‌ ಕುಟುಂಬಸ್ಥರು ಬಂದು ಮನೆಗೆ ಕರೆದುಕೊಂಡು ಹೋಗಿ ಪರಿಶೀಲಿಸಿದಾಗ ಮೂಗಿನಲ್ಲಿ ರಕ್ತ ಬರುತ್ತಿರುವುದನ್ನು ಗಮನಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ಮಾಡುವಷ್ಟರಲ್ಲೇ ಮಣಿಕಂಠನ ಪ್ರಾಣ ಹೋಗಿದೆ ಎಂದು ವೈದ್ಯರು ತಿಳಿಸಿದ್ದರು‌.

ಈ ಸಂಬಂಧ ಮಣಿಕಂಠನ ಸಾವು ಅನುಮಾನಾಸ್ಪದವಾಗಿದೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದರು‌. ವೈದ್ಯಕೀಯ ಪರೀಕ್ಷೆ ವರದಿ ನೀಡಿದ ವರದಿಯಲ್ಲಿ ಗಾಯದಿಂದ ಸಾವನ್ನಪ್ಪಿರುವುದಾಗಿ ಉಲ್ಲೇಖಿಸಿದರಿಂದ ಪ್ರಕರಣ ಗಂಭೀರವಾಗಿ ತೆಗೆದುಕೊಂಡ‌ ಪೊಲೀಸರು ಏನು ಗೊತ್ತಿಲ್ಲದಂತೆ ಓಡಾಡಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಹರಿಹರ: ಚಿಕನ್ ಸಾಂಬಾರ್​ ಮಾಡದ ಪತ್ನಿಯನ್ನು ನಶೆಯಲ್ಲಿ ಇರಿದು ಕೊಂದ ಕಿರಾತಕ ಪತಿ

ABOUT THE AUTHOR

...view details