ಬೆಂಗಳೂರು: ಲಾಕ್ಡೌನ್ ಇದ್ದರೂ ಸಾರ್ವಜನಿಕರು ಓಡಾಡುತ್ತಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಕೊರೊನಾ ಸೋಂಕು ಸಂಬಂಧ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಅವರು, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ, ಕಲಬುರಗಿ, ಮೈಸೂರು, ಕೊಡಗು, ಧಾರವಾಡ, ದ.ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಕರ್ಫ್ಯೂ ವಿಧಿಸಲಾಗುತ್ತದೆ. ಅತ್ಯಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ನಾಳೆಯಿಂದ ಬಿಎಂಟಿಸಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಅಂತರ್ ರಾಜ್ಯ ಸಾರಿಗೆ ಸೇವೆ ಹಾಗೂ ಎಲ್ಲಾ ಎಸಿ ಬಸ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಒಂಭತ್ತು ಜಿಲ್ಲೆಗಳಿಗೆ ಸಂಪರ್ಕಿಸುವ ಎಲ್ಲಾ ಸಾರಿಗೆ ವ್ಯವಸ್ಥೆಯನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸಲಾಗುವುದು. ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಸೇರಿ ನಗರದ ಹೊರಭಾಗದಲ್ಲಿ ಕೋವಿಡ್-19 ವಿಶೇಷ ಆಸ್ಪತ್ರೆಗಳನ್ನು ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ. 10 ಲಕ್ಷ ಜನಸಂಖ್ಯೆಯಲ್ಲಿ 200 ಜನರಿಗೆ ಪರೀಕ್ಷೆ ಮಾಡುವ ಸೌಕರ್ಯಗಳನ್ನು ಈ ಕೂಡಲೇ ಸಜ್ಜುಗೊಳಿಸಲಾಗುವುದು ಎಂದರು.
ಕರ್ನಾಟಕಕ್ಕೆ ಹೊಂದಿಕೊಂಡಿರುವ ಎಲ್ಲಾ ಗಡಿಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಜೊತೆಗೆ ಎಲ್ಲಾ ಚುನಾಣೆಗಳನ್ನು ಮುಂದೂಡಲಾಗಿದೆ. ಇನ್ನು ಬಾಲಬ್ರೂಹಿ ಅತಿಥಿ ಗೃಹವನ್ನು ಕೊರೊನಾ ವಾರ್ ರೂಂ ಆಗಿ ಪರಿವರ್ತನೆ ಮಾಡಲಾಗುತ್ತದೆ. ಕೊರೊನಾ ಸಂಬಂಧ ವಿಡಿಯೋ ಕಾನ್ಫರೆನ್ಸ್, ಸಭೆ ಎಲ್ಲವೂ ಇಲ್ಲಿ ನಡೆಯಲಿದೆ. ಸಿಎಂ ನೇತೃತ್ವದಲ್ಲಿ ವಾರ್ ರೂಂ ಕಾರ್ಯನಿವರ್ಹಿಸಲಿದೆ ಎಂದು ತಿಳಿಸಿದರು.
ಕಾರ್ಮಿಕರು ಹೆಚ್ಚಿರುವ ಕಾರ್ಖಾನೆಗಳಲ್ಲಿ ದಿನ ಬಿಟ್ಟು ದಿನ ಅರ್ಧ ಸಂಖ್ಯೆಯಲ್ಲಿ ಮಾತ್ರ ಕಾರ್ಮಿಕರನ್ನು ನಿಯೋಜಿಸಲು ಸೂಚಿಸಲಾಗಿದೆ. ಇನ್ನು ಬೆಂಗಳೂರು ನಗರದ ದಿನಗೂಲಿ ನೌಕರರಿಗೆ ಸರ್ಕಾರದಿಂದ ಆಹಾರ ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.