ಬೆಂಗಳೂರು: 2022-23 ಬಜೆಟ್ ವರ್ಷ ಮುಕ್ತಾಯವಾಗಿದೆ. ಬಿಜೆಪಿ ಸರ್ಕಾರ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ ಎಂದು ಪ್ರತಿಪಕ್ಷಗಳು ತೀವ್ರ ಟೀಕೆ ಮಾಡುತ್ತಿವೆ. ಈ ಮಧ್ಯೆ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ, ಬೊಮ್ಮಾಯಿ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ಸಾಲದ ಎತ್ತುವಳಿ ಮಾಡದೇ ಸಾಲದ ಹೊರೆ ಇಳಿಸಿದೆ.
2022-23 ಸಾಲಿನ ಆರ್ಥಿಕ ವರ್ಷ ಮುಕ್ತಾಯವಾಗಿದೆ. ಅಲ್ಲಿಗೆ ಬಜೆಟ್ ವರ್ಷವೂ ಮುಕ್ತಾಯಗೊಂಡಿದೆ. ಇತ್ತ ಬಿಜೆಪಿ ಸರ್ಕಾರದ ಅಧಿಕಾರವಾಧಿಯೂ ಮುಕ್ತಾಯಗೊಂಡಿದೆ. ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಇನ್ನೇನಿದ್ದರೂ ಹೊಸ ಸರ್ಕಾರ 2023-24 ಹಣಕಾಸು ವರ್ಷವನ್ನು ನಿರ್ವಹಿಸಲಿದೆ. ಬಿಜೆಪಿ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಬಜೆಟ್ ನಿರ್ವಹಣೆಗೆ ನೆಚ್ಚಿಕೊಂಡಿದ್ದು ಸಾಲವನ್ನೇ. ಆರ್ಥಿಕ ಮುಗ್ಗಟ್ಟಿನಿಂದ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿತ್ತು.
ಸಾಲದ ಪ್ರಮಾಣ ಹೆಚ್ಚಾಗಿರುವುದರಿಂದ ಪ್ರತಿಪಕ್ಷಗಳು ಬಿಜೆಪಿ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂಬ ಟೀಕೆ ಮಾಡುತ್ತಲೇ ಬಂದಿತ್ತು. 2022-23 ಸಾಲಿನಲ್ಲಿ ಆರ್ಥಿಕ ಚೇತರಿಕೆ ಕಂಡ ಕಾರಣ ತೆರಿಗೆ ಆದಾಯಗಳು ಗುರಿ ಮೀರಿ ಸಂಗ್ರಹವಾಗಿದೆ. ಇದು ಸರ್ಕಾರಕ್ಕೆ ನಿಟ್ಟುಸಿರು ಬಿಡುವಂತಾಯಿತು. ಇದೇ ಕಾರಣಕ್ಕೆ 2022-23 ಸಾಲಿನಲ್ಲಿ ಅಂದಾಜಿಸಿದ ಸಾಲಕ್ಕಿಂತ ಅತಿ ಕಡಿಮೆ ಸಾಲ ಎತ್ತುವಳಿ ಮಾಡಲಾಗಿದೆ.
ಆರ್ಬಿಐ ಮೂಲಕ 36,000 ಕೋಟಿ ಸಾಲ ಎತ್ತುವಳಿ :2022-23 ಸಾಲಿನಲ್ಲಿ ಬೊಮ್ಮಾಯಿ ಸರ್ಕಾರ ಒಟ್ಟು ಅಂದಾಜು ಸುಮಾರು 72,089 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿತ್ತು. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿತ್ತು. ಆದರೆ ಬದಲಾದ ಆರ್ಥಿಕ ಸ್ಥಿತಿಗತಿ ಹಿನ್ನೆಲೆ ಸರ್ಕಾರ ಅಂದಾಜಿಗಿಂತಲೂ ಅತಿ ಕಡಿಮೆ ಸಾಲ ಮಾಡಿದೆ. ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಆರ್ಥಿಕ ವರ್ಷದಲ್ಲಿ ಕೇವಲ 36,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ.
ಈ ಬಾರಿ ಆರ್ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ 2022-23 ಆರ್ಥಿಕ ವರ್ಷದಲ್ಲಿ ಬರೋಬ್ಬರಿ 68,000 ಸಾಲ ಮಾಡುವುದಾಗಿ ಆರ್ಬಿಐಗೆ ಮಾಹಿತಿ ನೀಡಿತ್ತು. ಆದರೆ 2022-23 ಆರ್ಥಿಕ ವರ್ಷ ಅಂತ್ಯಗೊಂಡಿದ್ದು, ಈವರೆಗೆ ಮಾಡಿದ ಸಾಲದ ಮೊತ್ತ ಕೇವಲ 36,000 ಕೋಟಿ ಸಾಲ ಮಾತ್ರ. ಕೊನೆಯ ತ್ರೈ ಮಾಸಿಕದಲ್ಲಿ ಜನವರಿ ತಿಂಗಳಲ್ಲಿ ಕೇವಲ 4,000 ಕೋಟಿ ರೂ. ಸಾಲ ಮಾಡಿದೆ. ಬಳಿಕ ಮಾರ್ಚ್ ಅಂತ್ಯದ ವರೆಗೆ ಸಾಪ್ತಾಹಿಕವಾಗಿ ನಡೆಸುವ ಆರ್ಬಿಐ ಸಾಲ ಎತ್ತುವಳಿ ಪ್ರಕ್ರಿಯೆಯಲ್ಲಿ ಕರ್ನಾಟಕ ಪಾಲ್ಗೊಳ್ಳಲೇ ಇಲ್ಲ.
ಕೊನೆಯ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಬರೋಬ್ಬರಿ 36,000 ಕೋಟಿ ರೂ. ಸಾಲ ಮಾಡಲು ಯೋಚಿಸಿತ್ತು. ಜನವರಿಯಿಂದ ಮಾರ್ಚ್ ವರೆಗಿನ ಕೊನೆಯ ತ್ರೈಮಾಸಿಕದಲ್ಲಿ 36,000 ಕೋಟಿ ರೂ. ಸಾಲ ಮಾಡುವುದಾಗಿ ರಾಜ್ಯ ಸರ್ಕಾರ ಆರ್ಬಿಐಗೆ ಮಾಹಿತಿ ನೀಡಿತ್ತು. ಜನವರಿಯಲ್ಲಿ ಒಟ್ಟು 16,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ತಿಳಿಸಿತ್ತು. ಆದರೆ, ಜನವರಿ ತಿಂಗಳಲ್ಲಿ ಕೇವಲ 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ.
ಫೆಬ್ರವರಿಯಲ್ಲಿ ಒಟ್ಟು 12,000 ಕೋಟಿ ರೂ. ಹಾಗೂ ಮಾರ್ಚ್ ತಿಂಗಳಲ್ಲಿ ಒಟ್ಟು 8,000 ಕೋಟಿ ರೂ. ಸಾಲ ಮಾಡುವುದಾಗಿ ಆರ್ಬಿಐಗೆ ಮುಂಗಡವಾಗಿ ಮಾಹಿತಿ ನೀಡಿತ್ತು. ಆದರೆ, ಜನವರಿ ತಿಂಗಳಲ್ಲಿ ಒಂದು ಬಾರಿ 4,000 ಕೋಟಿ ಸಾಲ ಮಾಡಿರುವುದು ಬಿಟ್ಟರೆ ಮಾರ್ಚ್ ಅಂತ್ಯದ ವರೆಗೆ ಎರಡು ತಿಂಗಳಲ್ಲಿ ಸರ್ಕಾರ ಆರ್ಬಿಐ ಮೂಲಕ ಯಾವುದೇ ಸಾಲ ಎತ್ತುವಳಿ ಮಾಡಿಲ್ಲ. ಆ ಮೂಲಕ ರಾಜ್ಯ ಮುಕ್ತ ಮಾರುಕಟ್ಟೆಯಿಂದ ಮಾಡಿದ ಸಾಲದ ಮೊತ್ತ ಕೇವಲ 36,000 ಕೋಟಿ ರೂ. ಮಾತ್ರ.
2021-22ರಲ್ಲಿ ಅಂದಾಜು ಮೀರಿ ಸಾಲ : 2021-22 ಬಜೆಟ್ ವರ್ಷದಲ್ಲಿ ಸರ್ಕಾರ ಅಂದಾಜು 71,332 ಕೋಟಿ ಸಾಲ ಮಾಡಲು ನಿರ್ಧರಿಸಿತ್ತು. ಆದರೆ ಬೊಮ್ಮಾಯಿ ಸರ್ಕಾರ ಅಂದಾಜು ಮೀರಿ ಸಾಲ ಮಾಡಿದ್ದರು. ಅಂದರೆ ಸುಮಾರು 80,633 ಕೋಟಿ ಸಾರ್ವಜನಿಕ ಸಾಲ ಮಾಡಲಾಗಿತ್ತು.
2022-23ರ ಸಾಲಿನಲ್ಲಿ ಬಜೆಟ್ ಅಂದಾಜಿನಂತೆ ಸುಮಾರು 72,000 ಕೋಟಿ ರೂ. ಸಾಲ ಮಾಡಲು ನಿರ್ಧರಿಸಲಾಗಿತ್ತು. ಮುಕ್ತ ಮಾರುಕಟ್ಟೆಯಿಂದ ಸುಮಾರು 67,911 ಕೋಟಿ ಸಾಲ ಮಾಡಲು ಸರ್ಕಾರ ಮುಂದಾಗಿತ್ತು. ಆದರೆ ಇದೀಗ ಆರ್ಥಿಕ ವರ್ಷ ಮುಕ್ತಾಯವಾಗಿದ್ದು, ಈವರೆಗೆ ಬೊಮ್ಮಾಯಿ ಸರ್ಕಾರ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಎತ್ತುವಳಿ ಮಾಡಿದ ಸಾಲದ 36,000 ಕೋಟಿ ರೂಪಾಯಿ. ಈ ಮೂಲಕ ರಾಜ್ಯ ಸರ್ಕಾರ ಜನರ ಮೇಲಿನ ಸಾಲದ ಹೊರೆಯನ್ನು ಕಡಿಮೆಗೊಳಿಸಿದೆ.
2022-23 ಸಾಲಿನ ಆರಂಭಿಕ ಎರಡು ತ್ರೈಮಾಸಿಕದಲ್ಲಿ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡದ ಸರ್ಕಾರ ಮೂರನೇ ತ್ರೈಮಾಸಿಕದಲ್ಲಿ ಸಾಲ ಮಾಡಲು ಆರಂಭಿಸಿತ್ತು. ನ.15ರಂದು ರಾಜ್ಯ ಸರ್ಕಾರ ಮೊದಲ ಸಾಲ ಎತ್ತುವಳಿ ಮಾಡಲು ಪ್ರಾರಂಭಿಸಿತ್ತು. ನವೆಂಬರ್ ತಿಂಗಳಲ್ಲಿ 16,000 ಕೋಟಿ ರೂ. ಸಾಲ ಎತ್ತುವಳಿ ಮಾಡಿತ್ತು. ಡಿಸೆಂಬರ್ ತಿಂಗಳಲ್ಲೂ ಒಟ್ಟು 16,000 ಕೋಟಿ ರೂ. ಸಾಲ ಮಾಡಿದೆ. ಜನವರಿಯಲ್ಲಿ ಒಂದು ಬಾರಿ ಮಾತ್ರ 4,000 ಕೋಟಿ ಸಾಲ ಎತ್ತುವಳಿ ಮಾಡಿತ್ತು. ಆ ಮೂಲಕ ಆರ್ಥಿಕ ವರ್ಷದ ಅಂತ್ಯಕ್ಕೆ ಈವರೆಗೆ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಒಟ್ಟು 36,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ :ಮಾರ್ಚ್ನಲ್ಲಿ ದೇಶದ ಜಿಎಸ್ಟಿ ಆದಾಯ ₹1.60 ಲಕ್ಷ ಕೋಟಿಗೆ ಏರಿಕೆ