ಬೆಂಗಳೂರು:''ಆದ್ಯತಾ ವಲಯಗಳಿಗೆ ಬಜೆಟ್‍ನಲ್ಲಿ ಸಾಕಷ್ಟು ಹಣ ಮೀಸಲಿಟ್ಟಿಲ್ಲ'' ಎಂದು ಬಿಜೆಪಿಯ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಮಾಡಿದ ಆರೋಪವು ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ಸೋಮವಾರ ನಡೆಯಿತು.
2023-24ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ, ಅಂಕಿ- ಅಂಶಗಳ ಸಹಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅರಗ ಜ್ಞಾನೇಂದ್ರ ಅವರು ಮುಂದಾದಾಗ, ಮಧ್ಯೆ ಪ್ರವೇಶಿಸಿದ ಇಂಧನ ಸಚಿವ ಕೆ ಜೆ ಜಾರ್ಜ್, ಆರೋಪದಲ್ಲಿ ಹುರುಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಡಳಿತ, ಪ್ರತಿಪಕ್ಷಗಳ ನಡುವೆ ವಾಗ್ವಾದ:ಈ ವೇಳೆ, ಬಿಜೆಪಿ ಶಾಸಕರಾದ ಅಶ್ವತ್ಧನಾರಾಯಣ, ಎಸ್ ಟಿ ಸೋಮಶೇಖರ್, ಅರವಿಂದ ಬೆಲ್ಲದ್ ಮೊದಲಾದವರು, ಸಚಿವ ಜಾರ್ಜ್ ಅವರ ಧೋರಣೆಯನ್ನು ಟೀಕಿಸಿದರು. ಆಡಳಿತ ಪಕ್ಷದ ಶಾಸಕರಾದ ಎನ್ ಎಚ್ ಕೋನರೆಡ್ಡಿ, ಕೆ ಎಂ ಶಿವಲಿಂಗೇಗೌಡ ಮತ್ತಿತರರು ಪ್ರತಿಭಟಿಸಿದಾಗ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು.
ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಯು ಟಿ ಖಾದರ್, ''ಎಲ್ಲರೂ ಒಮ್ಮೆಲೇ ಎದ್ದು ನಿಂತು ಮಾತನಾಡಲು ಶುರು ಮಾಡಿದರೆ, ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದೇ, ಗೊಂದಲ ಉಂಟಾಗುತ್ತದೆ. ಅವಕಾಶ ನೀಡಿದವರು ಮಾತನಾಡಿದರೆ, ಅರ್ಥಪೂರ್ಣ ಚರ್ಚೆಗೆ ಅನುಕೂಲವಾಗುತ್ತದೆ. ಜನಪರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳಲು ಸದನದ ಸದಸ್ಯರ ಆಶಯವಾಗಿರುತ್ತದೆ. ಅದಕ್ಕೆ ಪೂರಕವಾಗಿ ಮಾತನಾಡುವುದು ಒಳ್ಳೆಯದು. ಉತ್ತಮ ನಾಯಕರಾಗಬೇಕಾದರೆ, ಉತ್ತಮ ಕೇಳುಗರೂ ಆಗಿರಬೇಕು ಎಂದು ಕಿವಿಮಾತು ಹೇಳಿದರು.
ಬಜೆಟ್ ಪಾವಿತ್ರ್ಯತೆಗೆ ತೀಲಾಂಜಲಿ:ಇದಕ್ಕೂ ಮುನ್ನ ಬಜೆಟ್ ಮೇಲೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು, ''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಮುಂಗಡಪತ್ರದಲ್ಲಿ ಬಜೆಟ್ ಪಾವಿತ್ರ್ಯತೆಗೆ ತೀಲಾಂಜಲಿ ನೀಡಿದ್ದಾರೆ'' ಎಂದು ಆರೋಪಿಸಿದರು. ''ಬಜೆಟ್‍ನಲ್ಲಿ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು ಸಂಪ್ರದಾಯ. ಆದರೆ, ಹಿಂದಿನ ಸರ್ಕಾರವನ್ನು ಬಜೆಟ್ ಭಾಷಣದಲ್ಲಿ ತೆಗಳಿದ್ದಾರೆ. ಕೇಂದ್ರ ಸರ್ಕಾರ ದೇಶವನ್ನು ಹಾಳು ಮಾಡಿದೆ ಎಂಬಂತೆ ಬಿಂಬಿಸಿದ್ದಾರೆ. ಈ ಹಿಂದೆ ಯಾರೂ ಈ ರೀತಿಯ ಬಜೆಟ್ ಮಂಡಿಸಿರಲಿಲ್ಲ. ಇದನ್ನು ಖಂಡಿಸುತ್ತೇನೆ'' ಎಂದರು.