ಬೆಂಗಳೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ಪುನರಾಯ್ಕೆಯಾಗಿರುವ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಡಿಸಿಎಂ ಗೋವಿಂದ ಕಾರಜೋಳ ಶುಭ ಕೋರಿದ್ದಾರೆ.
ಲಾಲ್ಬಾಗ್ ವೆಸ್ಟ್ ಗೇಟ್ ಬಳಿ ಇರುವ ಅನಂತ್ಕುಮಾರ್ ನಿವಾಸಕ್ಕೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡಿ, ತೇಜಸ್ವಿನಿ ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. 2ನೇ ಬಾರಿ ಪಕ್ಷದ ರಾಜ್ಯ ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದು, ಪಕ್ಷಕ್ಕೆ ನಿಮ್ಮ ಸೇವೆ ಮುಂದುವರೆಸುವಂತೆ ಮನವಿ ಮಾಡಿದರು.
ಅನಂತ್ಕುಮಾರ್ ನಿಧನದ ನಂತರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ತೇಜಸ್ವಿನಿ ಅನಂತ್ಕುಮಾರ್ ಅವರನ್ನು ಅಂದಿನ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಪಕ್ಷದ ರಾಜ್ಯ ಘಟಕ ಆಯ್ಕೆ ಮಾಡಿತ್ತು. ಆದರೆ, ಹೈಕಮಾಂಡ್ ಕೊನೆ ಕ್ಷಣದಲ್ಲಿ ತೇಜಸ್ವಿ ಸೂರ್ಯಗೆ ಟಿಕೇಟ್ ಪ್ರಕಟಿಸಿತ್ತು.
ನಂತರ ಅವರಿಗೆ ರಾಜ್ಯ ಉಪಾಧ್ಯಕ್ಷೆ ಸ್ಥಾನವನ್ನು ಬಿ ಎಸ್ ಯಡಿಯೂರಪ್ಪ ನೀಡಿದ್ದರು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಕೂಡ ಅವರನ್ನು ಉಪಾಧ್ಯಕ್ಷೆ ಸ್ಥಾನದಲ್ಲೇ ಮುಂದುವರೆಸಿದ್ದಾರೆ.