ಬೆಂಗಳೂರು:ಐಟಿ, ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಪರಿಣತರ ಜತೆಗೆ ಇಂದು ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಜ್ಞರ ಸಲಹೆಗಳನ್ನು ಬಜೆಟ್‍ನಲ್ಲಿ ಸೇರಿಸಿ, ಕಾರ್ಯರೂಪಕ್ಕೆ ತರುವ ಭರವಸೆ ನೀಡಿದ್ದಾರೆ.
ಇಂದು ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿಜ್ಞಾನಿ, ಭಾರತ ರತ್ನ ಸಿ.ಎನ್.ಆರ್. ರಾವ್, ಐಸ್ಪಿರಿಟ್‍ನ ಸಂಜಯ ಅನಂದರಾಮ್, ಸ್ಟಾರ್ಟ್‍ಆಪ್‍ಗಳಿಗೆ ಸಂಬಂಧಿಸಿದ ವಿಜನ್ ಗ್ರೂಪ್‍ನ ರವಿ ಗುರುರಾಜ್, ಸಿ-ಕ್ಯಾಂಪ್ಸ್‍ನ ಡಾ. ತಸ್ಲಿಮಾ ಆರೀಫ್ ಸೈಯದ್ ಸೇರಿದಂತೆ ಹಲವು ಐಟಿ ಪರಿಣತರು, ವಿಜ್ಞಾನಿಗಳು, ತಂತ್ರಜ್ಞರು ತಮ್ಮ ಸಲಹೆಗಳನ್ನು ನೀಡಿದ್ರು.
ಸರ್ಕಾರದ ಎಲ್ಲ ಇಲಾಖೆಗಳ ಇ-ಆಡಳಿತ ವ್ಯವಸ್ಥೆಯನ್ನು ಒಂದೇ ಪ್ಲಾಟ್‍ಫಾರಂಗೆ ತರುವುದು. ಕೃತಕ ಬುದ್ಧಿಮತ್ತೆಗೆ ಆದ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸಹೊಸ ಆವಿಷ್ಕಾರಗಳಿಗೆ ಒತ್ತು ನೀಡುವ ಸಂಬಂಧ ಪರಿಣಿತರಿಂದ ಸಲಹೆಗಳು ಬಂದಿದ್ದು, ಅವೆಲ್ಲವನ್ನೂ ಬಜೆಟ್‍ನಲ್ಲಿ ಸೇರಿಸುವ ಪ್ರಯತ್ನ ನಡೆಸಲಾಗುವುದು ಎಂದು ಅಶ್ವತ್ಥನಾರಾಯಣ ಅವರು ಸಭೆ ನಂತರ ತಿಳಿಸಿದರು.
ಐಟಿ, ಬಿಟಿ ಮತ್ತು ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದ ಪರಿಣತರ ಜೊತೆ ಡಿಸಿಎಂ ಬಜೆಟ್ ಪೂರ್ವಭಾವಿ ಸಭೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಫೆಬ್ರುವರಿ 3 ರಂದು ಬಜೆಟ್ ಪೂರ್ವಭಾವಿ ಸಭೆ ಇದ್ದು, ಅಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ಅವರು ಹೇಳಿದರು. ಸಭೆಯಲ್ಲಿ ಮಾತನಾಡಿದ ಭಾರತ ರತ್ನ ಪರುಷ್ಕೃತ ಹಿರಿಯ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರು, ವಿಜ್ಞಾನ ಕ್ಷೇತ್ರದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ವಿದ್ಯಾರ್ಥಿವೇತನ ನೀಡಬೇಕು. ಹೊಸರೀತಿಯ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡಿರುವ ವಿಶ್ವವಿದ್ಯಾಲಯಗಳಿಗೆ ವಾರ್ಷಿಕ ಪ್ರಶಸ್ತಿ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ತೈವಾನ್‍ನ ಐಟಿ ಆರ್ ಮಾದರಿಯಲ್ಲಿ ಆವಿಷ್ಕಾರಗಳಿಗೆ ಉತ್ತೇಜನ ನೀಡುವಂತಹ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಅವರು ಸಲಹೆ ನೀಡಿದರು.
ಐಟಿ- ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಐಟಿ-ಬಿಟಿ ನಿರ್ದೇಶನಾಲಯದ ನಿರ್ದೇಶಕ ಪ್ರಶಾಂತ ಮಿಶ್ರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.