ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಕುಮಾರಸ್ವಾಮಿ ಇವತ್ತು ಹೊಸದಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದರು. ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾವೇರಿ ಬಗ್ಗೆ ಹೋರಾಟ ಮಾಡ್ತಿದ್ದಾರೆ. ನಾವು ಮೇಕೆದಾಟು ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಅಲ್ಲಿ ಅಣೆಕಟ್ಟು ಕಟ್ಟಿದರೆ ಏನಾಗುತ್ತದೆ ಎಂದು ತಮಿಳುನಾಡಿನವರಿಗೆ ಕೋರ್ಟ್ ಕೇಳಿದೆ. ಬಿಜೆಪಿ 25 ಸಂಸದರು ಈ ಹಿಂದೆ ನಡೆದ ಸಭೆಗೆ ಬಂದಿದ್ದರು. ಅದೇ ರೀತಿ ಒಗ್ಗಟ್ಟಾಗಿ ಕೇಂದ್ರದ ಮುಂದೆ ಹೋಗಿ ಕೇಳಲಿ. ಮೇಕೆದಾಟು ಯೋಜನೆಗೆ ಹಣ ಮೀಸಲಿಡಲಾಗಿದೆ. ತಮಿಳುನಾಡಿಗೆ 2,000 ಕ್ಯೂಸೆಕ್ ನೀರು ಹೋಗ್ತಿದೆ. ಸೀಪೇಜ್ ವಾಟರ್ ಈಗ ಹೋಗ್ತಿದೆ. ಅದಕ್ಕೆ 1,000 ಕ್ಯೂಸೆಕ್ ನೀರು ಸೇರುತ್ತದೆ. ಕೆಆರ್ಎಸ್ನಿಂದ ಒಂದು ತೊಟ್ಟು ನೀರು ಬಿಡಲ್ಲ ಎಂದು ತಿಳಿಸಿದರು.
ನಮ್ಮ ಕಾನೂನು ತಜ್ಞರ ತಂಡ ದೆಹಲಿಗೆ ಹೋಗಿದೆ. ಅಲ್ಲಿ ಕಾನೂನು ಹೋರಾಟ ನಡೆಸಲಿದೆ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ. ನಾವು ನಮ್ಮ ನೀರಿಗಾಗಿ ಹೋರಾಟ ಮಾಡುತ್ತೇವೆ. ಮೇಕೆದಾಟು ಯೋಜನೆಗೆ ಬಿಎಸ್ವೈ ಅವಕಾಶ ಕೊಡಿಸಲಿ. ಕೇಂದ್ರದಿಂದ ಅವಕಾಶ ಕೊಡಿಸಲಿ. ನಾವು ಮೂರು ವರ್ಷದಲ್ಲಿ ಡ್ಯಾಂ ಕಟ್ಟುತ್ತೇವೆ ಎಂದು ಡಿಕೆಶಿ ಹೇಳಿದರು.
ಕರ್ನಾಟಕ ಬಂದ್ ವಿಚಾರವಾಗಿ ಮಾತನಾಡಿ, ಬೆಂಗಳೂರು ಬಂದ್ ಯಶಸ್ವಿಯಾಗಿದೆ. ಜನ ಬಂದ್ಗೆ ಎಲ್ಲ ಸಹಕಾರ ಕೊಟ್ಟಿದ್ದಾರೆ. ಪ್ರತಿಭಟನೆಗೆ ನಮ್ಮ ಸಹಕಾರವಿರುತ್ತದೆ. ಹೋರಾಟಗಾರರ ಜೊತೆ ನಾವು ಇದ್ದೇವೆ. ಸೆ.29ರಂದು ಮತ್ತೆ ಕೆಲ ಸಂಘಟನೆ ಬಂದ್ ಕರೆದಿವೆ. ನಾನು ಅವರಿಗೆ ಮನವಿ ಮಾಡ್ತೇನೆ. ಈಗಾಗಲೇ ಸಾರ್ವಜನಿಕರು ಕಷ್ಟದಲ್ಲಿದ್ದಾರೆ. ಬಂದ್ ಮಾಡಿ ಜನರಿಗೆ ತೊಂದರೆಯಾಗುವುದು ಬೇಡ. ನಿಮ್ಮ ಹೋರಾಟದಿಂದ 3000 ಕ್ಯೂಸೆಕ್ ನೀರು ಉಳಿದಿದೆ. ತಮಿಳುನಾಡು ಬೇಡಿಕೆ ವಜಾ ಮಾಡಿದ್ದು ಸಂತಸ ತಂದಿದೆ. ಸಿಪೇಜ್ ನೀರು, ಇನ್ ಫ್ಲೋ ನೀರು ಹೋಗೇ ಹೋಗ್ತದೆ. ನಾವು ಕಾನೂನಿಗೂ ಗೌರವ ಕೊಡಬೇಕು. ನಮ್ಮ ರೈತರನ್ನೂ ನಾವು ಕಾಪಾಡಿಕೊಳ್ಳುತ್ತೇವೆ. ಬೆಂಗಳೂರಿಗೂ ಕುಡಿಯುವ ನೀರು ಸಿಗಲಿದೆ ಎಂದು ಹೇಳಿದರು.