ಕರ್ನಾಟಕ

karnataka

ETV Bharat / state

ನಾಗ್ಪುರ ಶಿಕ್ಷಣ ನೀತಿ ರದ್ದು, ಹೊಸ ಕರ್ನಾಟಕ ಶಿಕ್ಷಣ ನೀತಿ ಜಾರಿ: ಡಿಸಿಎಂ ಡಿ.ಕೆ.ಶಿವಕುಮಾರ್ - etv bharat kannada

ಅತಿ ಶೀಘ್ರದಲ್ಲಿ ಹೊಸ ಪೀಳಿಗೆಯ ಬೆಳವಣಿಗೆಗೆ ಅನುಗುಣವಾಗಿ ಕರ್ನಾಟಕ ಶಿಕ್ಷಣ ನೀತಿ ರೂಪಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

dcm-dk-shivakumar-says-soon-new-karnataka-education-policy-implemented
ನಾಗ್ಪುರ ಶಿಕ್ಷಣ ನೀತಿ ರದ್ದು, ಹೊಸ ಕರ್ನಾಟಕ ಶಿಕ್ಷಣ ನೀತಿ ಜಾರಿ: ಡಿಸಿಎಂ ಡಿ.ಕೆ.ಶಿವಕುಮಾರ್

By ETV Bharat Karnataka Team

Published : Aug 21, 2023, 8:17 PM IST

Updated : Aug 21, 2023, 9:19 PM IST

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು: "ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರದ್ದು ಮಾಡಿ, ಹೊಸ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ನೀತಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಇನ್ನೊಂದು ವಾರದಲ್ಲಿ ಶಿಕ್ಷಣ ತಜ್ಞರ ಸಮಿತಿ ಮಾಡಿ ಮುಂದಿನ ಪೀಳಿಗೆ ಮಕ್ಕಳ ಏಳಿಗೆಗಾಗಿ ಕರ್ನಾಟಕ ಶಿಕ್ಷಣ ನೀತಿ ರೂಪಿಸುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ವಾಗ್ದಾನದಂತೆ ನಾಗ್ಪುರ ಶಿಕ್ಷಣ ನೀತಿ ರದ್ದು ಮಾಡುತ್ತೇವೆ" ಎಂದರು.

"ಶಿಕ್ಷಣ ತಜ್ಞರ ಸಮಿತಿ ರಚನೆ ಸಂಬಂಧ ನಮ್ಮ ಇಬ್ಬರು ಸಚಿವರು ಪ್ರಸ್ತಾವನೆ ನೀಡುತ್ತಾರೆ. ಅತಿ ಶೀಘ್ರದಲ್ಲಿ ಹೊಸ ಪೀಳಿಗೆಯ ಬೆಳವಣಿಗೆಗೆ ಅನುಗುಣವಾಗಿ ಕರ್ನಾಟಕ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು. ನಮ್ಮ ಪ್ರಣಾಳಿಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದು, ನಮ್ಮ ವಾಗ್ದಾನಗಳಿಗೆ ಬದ್ಧವಾಗಿರುತ್ತೇವೆ. ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಮ್ಮಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ, ಆದರೂ ಬಿಜೆಪಿ ಸರ್ಕಾರ 2021ರಲ್ಲಿ ತರಾತುರಿಯಲ್ಲಿ ಇದನ್ನು ಜಾರಿಗೆ ತಂದಿದೆ. ನಮ್ಮ ಮಕ್ಕಳಿಗೆ ಹಳೆ ಕಾಲದ ಶಿಕ್ಷಣ ನೀಡಲು ಬಿಜೆಪಿ ಹೊರಟಿತ್ತು. ನಾವು ಎಲ್ಲಾ ರಂಗಗಳಲ್ಲೂ ಮುಂದಿದ್ದೇವೆ. ಹೀಗಿರುವಾಗ ಹಲವಾರು ನ್ಯೂನ್ಯತೆಗಳಿರುವ ನಾಗ್ಪುರ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ" ಎಂದು ತಿಳಿಸಿದರು.

"ಗುಜರಾತ್‌, ಉತ್ತರಪ್ರದೇಶ ಸೇರಿದಂತೆ ಬಿಜೆಪಿ ಆಡಳಿತವಿರುವ ಯಾವ ರಾಜ್ಯಗಳಲ್ಲೂ ಎನ್‌ಇಪಿ ಜಾರಿಗೆ ತಂದಿಲ್ಲ. ಹೀಗಿರುವಾಗ ನಮ್ಮ ರಾಜ್ಯದಲ್ಲಿ ಏಕೆ ಬೇಕು?. ನಮ್ಮ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಹಳೆ ಕಾಲದ ಶಿಕ್ಷಣ ನಮ್ಮ ಮಕ್ಕಳಿಗೆ ಬೇಡ. ಯಾವುದೇ ಶಿಕ್ಷಣ ನೀತಿ ಪ್ರಾಥಮಿಕ ಹಂತದಿಂದ ಜಾರಿಗೆ ಬರಬೇಕು, ಆಗ ಅದರ ಸಾಧಕ-ಬಾಧಕಗಳು ತಿಳಿಯುತ್ತವೆ. 2013- 18 ಸಿದ್ದರಾಮಯ್ಯ ಅವರ ಸರ್ಕಾರದ ವೇಳೆ ಜ್ಞಾನ ಆಯೋಗ ಎಂದು ಮಾಡಿ, ಕರ್ನಾಟಕ ಶಿಕ್ಷಣ ನೀತಿಯನ್ನು ರೂಪಿಸಲಾಗಿತ್ತು. ಅದರ ಅಂಶಗಳನ್ನು ಈಗ ಪರಿಗಣನೆಗೆ ತೆಗೆದುಕೊಳ್ಳಲಾಗುವುದು" ಎಂದರು.

ಎನ್‌ಇಪಿಯಲ್ಲೇ ಮುಂದುವರೆಯುತ್ತೇವೆ ಎಂದು ಡೀಮ್ಡ್‌ ವಿಶ್ವವಿದ್ಯಾಲಯಗಳು ಹೇಳಿವೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಸಮಿತಿ ರಚನೆಯ ನಂತರ ಅಲ್ಲಿರುವ ಶಿಕ್ಷಣ ತಜ್ಞರ ಅಭಿಪ್ರಾಯ ಕೇಳಿ, ಮುಂದುವರೆಯಲಾಗುವುದು. ಶಿಕ್ಷಣವು ರಾಜ್ಯ ಪಟ್ಟಿಯಲ್ಲಿ ಇರುವಂತ ವಿಷಯ, ಬೇರೆಯವರ ಹಸ್ತಕ್ಷೇಪ ನಮಗೆ ಬೇಡ" ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಇದ್ದರು.

ಇದನ್ನೂ ಓದಿ:ವಿಶೇಷ ಅನುದಾನ ಬಿಡುಗಡೆಗೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದ ಸಿದ್ದರಾಮಯ್ಯ

ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ - ಸಿಎಂ:"ಶಿಕ್ಷಣ ನೀತಿ ನಿರೂಪಣೆ ರಾಜ್ಯದ ವಿಷಯ. ಈ ಹಿನ್ನೆಲೆಯಲ್ಲಿ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಶಿಕ್ಷಣ ನೀತಿ ಕುರಿತಂತೆ ನಡೆಸಲಾದ ಸಭೆಯಲ್ಲಿ ಈ ವಿಷಯ ತಿಳಿಸಿದರು.

Last Updated : Aug 21, 2023, 9:19 PM IST

ABOUT THE AUTHOR

...view details