ನವದೆಹಲಿ/ಬೆಂಗಳೂರು: ಕೆಲವು ಒತ್ತಡದಲ್ಲಿ ಯಾರಿಗೆ ಯಾವ ಆದೇಶ ಎಂದು ಗೊತ್ತಾಗುವುದಿಲ್ಲ. ಎಲ್ಲವೂ ಒಂದು ಹಂತಕ್ಕೆ ಬರಲು ಸಮಯ ಬೇಕು. ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿಂದು ಮಾತನಾಡಿದ ಅವರು, ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಇಲಾಖೆಯಲ್ಲಿ ಇದುವರೆಗೂ ಒಂದೇ ಒಂದು ವರ್ಗಾವಣೆ ಮಾಡಿಲ್ಲ. ಅವರಿಗೆ ಮಾಹಿತಿ ಇದ್ದರೆ ನೀಡಲಿ ಎಂದರು.
ಟ್ರಿಬ್ಯೂನಲ್ ರಚನೆ ವಿಚಾರದಲ್ಲಿ ಕೂತು ಚರ್ಚೆ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಇದೆಯೇ ಎಂಬ ಬಗ್ಗೆ ವಾಸ್ತವಾಂಶ ಅರ್ಥ ಮಾಡಿಕೊಂಡರೆ ಎಲ್ಲವೂ ಸಾಧ್ಯ. ನದಿ ನೀರು ವಿಚಾರವಾಗಿ ದೊಡ್ಡ ವಿವಾದಕ್ಕೂ, ಇದಕ್ಕೂ ವ್ಯತ್ಯಾಸವಿದೆ. ಈ ನೀರಿನ ಪ್ರಮಾಣ ಒಂದು ಟಿಎಂಸಿ ಕೂಡ ಇಲ್ಲ. ಪ್ರಾಧಿಕಾರ ರಚನೆ ಆದರೆ ಈ ಯೋಜನೆಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಡಬಲ್ ಇಂಜಿನ್ ಸರ್ಕಾರರಿಂದ ಇದು ಸಾಧ್ಯ ಆಗಿರಲಿಲ್ಲ, ಈಗ ಯಾವ ರೀತಿ ಪ್ರಯತ್ನ ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳು ಕೂಡ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಹಿತ ಕಾಪಾಡಬೇಕು. ಅವರು ಮಾಡಲಿಲ್ಲ ಎಂದು ನಾವು ನಮ್ಮ ಕರ್ತವ್ಯ ಮಾಡದೇ ಇರಲು ಸಾಧ್ಯವೇ ಎಂದು ಬಿಜೆಪಿ ನಾಯಕರ ಕಾಲೆಳೆದರು.
ಹೆಚ್ಚುವರಿ ನೀರು ಸಮುದ್ರದ ಪಾಲಾಗುತ್ತಿರುವ ಬಗ್ಗೆ ಕೇಳಿ ಪ್ರಶ್ನೆಗೆ, ಕಳೆದ ವರ್ಷ 700 ಟಿಎಂಸಿ ನೀರು ಸಮುದ್ರ ಪಾಲಾಗಿದೆ. ಈ ವರ್ಷ ಕುಡಿಯಲು ನೀರಿಲ್ಲ. ಅಣೆಕಟ್ಟು ಭದ್ರತೆ ವಿಚಾರವಾಗಿ ಮುಂದಿನ ತಿಂಗಳು ಒಂದು ಸಭೆ ಇದೆ. ಆ ಸಭೆಯನ್ನು ಕೆಆರ್ಎಸ್ನಲ್ಲಿ ಆಯೋಜಿಸುತ್ತಿದ್ದು, ಸಭೆಗೆ ಬಂದವರು ಪರಿಸ್ಥಿತಿ ಕಣ್ಣಾರೆ ನೋಡಲಿ. ನಮ್ಮಲ್ಲಿ ಮಳೆ ಬರುವುದೇ 100 ದಿನ. ಒಂದು ದಿನ ಮಳೆ ಬಂದರೆ ವಿದ್ಯುತ್ ಬಳಕೆಯಲ್ಲಿ ಎಷ್ಟು ಉಳಿತಾಯ ಇದೆ ಎಂದು ನನಗೆ ಅರಿವಿದೆ ಎಂದು ಹೇಳಿದರು.
ಇನ್ನು ಪ್ರಧಾನಿಗಳು ಬಂದರೆ ನಾವು ಭೇಟಿ ಮಾಡಬೇಕು. ಸಿದ್ದರಾಮಯ್ಯ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಸೌಹಾರ್ದಯುತ ಭೇಟಿ ಸಹಜ. ಕೃಷ್ಣಾ ಅವರು ಸಿಎಂ ಆಗಿದ್ದಾಗ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು ಎಂದರು.
ತೆಲಂಗಾಣದಲ್ಲಿ ಶರ್ಮಿಳಾ ಅವರ ಕಾಂಗ್ರೆಸ್ ಸೇರ್ಪಡೆಗೆ ಡಿ.ಕೆ. ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ ಎಂದು ಕೇಳಿದ ಮಾಧ್ಯಮಗಳ ಪ್ರಶ್ನೆಗೆ, ನಾನು ಆ ವಿಚಾರವಾಗಿ ಮಾತನಾಡುವುದಿಲ್ಲ. ಅವರದ್ದು ಬಹಳ ಗೌರವಯುತ ಕುಟುಂಬ. ಅವರ ತಂದೆ ಹಾಗೂ ನಾನು ಉತ್ತಮ ಸ್ನೇಹಿತರು. ಜತೆಯಲ್ಲಿ ರಾಜಕೀಯ ಮಾಡಿದ್ದೆವು. ರಾಜಶೇಖರ ರೆಡ್ಡಿ ಅವರಿಗೆ ನನ್ನ ಮೇಲೆ ಅಭಿಮಾನ ಇತ್ತು ಎಂದರು. ರಾಷ್ಟ್ರ ರಾಜಕಾರಣ ಪ್ರವೇಶಿಸುತ್ತೀರಾ ಎಂದು ಕೇಳಿದಾಗ, ನನಗೆ ಹಿಂದಿ ಬರುವುದಿಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿ ನಿಭಾಯಿಸಿ, ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಂಡರೆ ಸಾಕು ಎಂದು ತಿಳಿಸಿದರು.
ಇದನ್ನೂ ಓದಿ:ಅಲ್ಪಸಂಖ್ಯಾತರಿಗೆ ರೂಪಿಸಿದ್ದ ಕಾರ್ಯಕ್ರಮಗಳು ಪುನರಾರಂಭ: ಸಿಎಂ ಸಿದ್ದರಾಮಯ್ಯ ಭರವಸೆ