ಬೆಂಗಳೂರು: ನನಗೆ ದ್ವೇಷದ ರಾಜಕೀಯ ಬೇಕಿಲ್ಲ. ಅದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು. ವಿಧಾನಸೌಧದಲ್ಲಿ ಇಂದು ನಡೆದ ಬೆಂಗಳೂರು ಸಮಗ್ರ ಅಭಿವೃದ್ಧಿ ಕುರಿತ ನಗರದ ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ನೀವು ಯಾವುದೇ ರಾಜಕೀಯ ಪಕ್ಷದವರು ಆಗಿರಬಹುದು. ಒಟ್ಟಿಗೆ ಕೆಲಸ ಮಾಡೋಣ. ರಾಜಕೀಯ ಬಿಟ್ಟು ನಗರದ ಅಭಿವೃದ್ಧಿ ಮಾಡೋಣ. ರಾಜಕೀಯ ಮಾಡ್ತೀನಿ ಅಂದ್ರೆ ನಾನು ಅದಕ್ಕೂ ರೆಡಿ. ಪ್ರೀತಿಗೂ ಸರಿ, ಸಂಘರ್ಷಕ್ಕೂ ರೆಡಿ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿಗೆ ನಿಮ್ಮ ಸಂಪೂರ್ಣ ಸಹಕಾರ, ಸಲಹೆ ಅಗತ್ಯ. ಚುನಾವಣೆ ರಾಜಕೀಯ ಮುಗೀತು. ಈಗ ರಾಜಕೀಯ ಗೊಡವೆ ಬೇಡ. ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸ ಏನೇ ಇರಬಹುದು. ಅದನ್ನು ಪಕ್ಕಕ್ಕಿಡೋಣ. ಬೆಂಗಳೂರು ಅಭಿವೃದ್ಧಿಗೆ ಸಲಹೆ ಕೊಡಿ. ಮಾಜಿ ಪ್ರಧಾನಿ ವಾಜಪೇಯಿ ಅವರು ಬಹಳ ಹಿಂದೆಯೇ ವಿಶ್ವಮಟ್ಟದಲ್ಲಿ ಬೆಂಗಳೂರು ನಗರದ ಘನತೆ, ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರು. ಈಗಿನ ಪ್ರಧಾನಿಯವರೂ ಅದನ್ನು ಬಹಳ ಸಾರಿ ಹೇಳಿದ್ದಾರೆ. ಹೀಗಾಗಿ ನಾವು-ನೀವೆಲ್ಲಾ ಸೇರಿ ಬೆಂಗಳೂರಿನ ಘನತೆ, ಗೌರವ, ಹೆಚ್ಚಿಸೋಣ ಎಂದು ಮನವಿ ಮಾಡಿದ್ರು.
ಬೆಂಗಳೂರಿನ ನಾಗರೀಕರು ಮೂಲಸೌಕರ್ಯ ಕೊರತೆಯಿಂದ ಬಹಳ ತೊಂದರೆ ಅನುಭವಿಸಿದ್ದಾರೆ. ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದಾರೆ. ಸಮರ್ಪಕ ನಾಗರಿಕ ಸೌಕರ್ಯ ಪೂರೈಕೆ ನಮ್ಮೆಲ್ಲರ ಕರ್ತವ್ಯ. ನೀವು ನನಗೆ ಸಲಹೆ ಕೊಡಿ. ಅವುಗಳನ್ನು ಅನುಷ್ಠಾನಕ್ಕೆ ತರೋಣ. ಬೆಂಗಳೂರಿನ ಗೌರವ ಹೆಚ್ಚಿಸೋಣ. ಬೆಂಗಳೂರಿನ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಪ್ರಮಾಣದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ, ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆ ಆಗುತ್ತಿದೆಯೇ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ವರದಿ ಕೊಡಬೇಕು ಎಂದರು.