ಕೆಆರ್ಪುರ: ನಿವೇಶನ ಹಂಚಿಕೆ ಮಾಡಲು ಒತ್ತಾಯಿಸಿ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಿಪಬ್ಲಿಕ್ ಸೇನಾ ವತಿಯಿಂದ ಪ್ರತಿಭಟನೆ ಮಾಡಲಾಯಿತು.
14 ವರ್ಷಗಳಿಂದ ಬಡವರಿಗೆ ಮೀಸಲು ಮಾಡಿದ ಜಾಗದಲ್ಲಿ ನಿವೇಶನ ನೀಡದೇ ಸತಾಯಿಸುತ್ತಿರುವ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಚನ್ನಸಂದ್ರ ಗ್ರಾಮದ ಸರ್ವೆ ನಂ. 115ರಲ್ಲಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ತೀರ್ಮಾನದಂತೆ ಅರ್ಹ ಫಲಾನುಭವಿಗಳಿಗೆ ಕೂಡಲೇ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೋರಹುಣಿಸೆ ಎನ್. ವೆಂಕಟೇಶ ಮಾತನಾಡಿ, ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಚನ್ನಸಂದ್ರ ಗ್ರಾಮದ ಸರ್ವೇ ನಂ.115ರಲ್ಲಿ ದಲಿತ, ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಮತ್ತು 2006ರಲ್ಲಿ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದಂತೆ ಅರ್ಹ ಫಲಾನುಭವಿಗಳಿಗೆ ಇದುವರೆಗೂ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ ಎಂದು ದೂರಿದರು.
ಇದೇ ಸಮಯದಲ್ಲಿ ಕರ್ನಾಟಕ ರಿಪಬ್ಲಿಕ್ ಸೇನಾ ರಾಜ್ಯದ್ಯಕ್ಷ ಜಿಗಣಿ ಶಂಕರ್ ಮಾತನಾಡಿ, ಸರ್ಕಾರಿ ಕಚೇರಿ ಅಧಿಕಾರಿಗಳು ಬಡವರ ಪರ ಕಾರ್ಯ ನಿರ್ವಹಿಸುವುದಿಲ್ಲ ಎಂದು ದೂರಿದರು. ಕಳೆದ 14 ವರ್ಷಗಳ ಕಾಲ ಬಡವರಿಗೆ ನಿವೇಶನ ನೀಡದೇ ವಂಚನೆ ಮಾಡುತ್ತಿದ್ದಾರೆ. ಬಡವರು ಮನೆ ಬಾಡಿಗೆ ಕಟ್ಟಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.