ಕರ್ನಾಟಕ

karnataka

ETV Bharat / state

ಹೆಣ ಹೂಳಲೂ ಜಿಎಸ್‌ಟಿ ಕಟ್ಟಬೇಕು ಎಂದರೆ ಇದೆಂಥಾ ನ್ಯಾಯ ರೀ ಸರ್ಕಾರದ್ದು?: ಡಿಕೆಶಿ ಪ್ರಶ್ನೆ

ಸರ್ಕಾರ ಸಂತೋಷವಾಗಿರೋದು ನಮಗೆ ಮುಖ್ಯವಲ್ಲ. ಜನರಿಗೆ ಏನು ಅನುಕೂಲ ಆಗುತ್ತೆ ಅದು ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್  ಅವರು ಮಾತನಾಡಿರುವುದು
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಮಾತನಾಡಿರುವುದು

By

Published : Jul 20, 2022, 6:06 PM IST

ಬೆಂಗಳೂರು: ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ಎಲ್ಲ ಉತ್ಪನ್ನಗಳ ಮೇಲಿನ ಜಿಎಸ್​ಟಿ ಕೂಡಲೇ ವಾಪಸ್ ಪಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರ ಸರ್ಕಾರ ಕೂಡಲೇ ಈ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ನಾವು ಹೋರಾಟ ಮಾಡಬೇಕಾಗುತ್ತದೆ. ನಿತ್ಯ ಜನರಿಗೆ ತೊಂದರೆ ಕೊಡುವುದಾಗಿದೆ. ನಾವು ಪ್ರತಿ ತಾಲೂಕಿನಲ್ಲಿ ಹೋರಾಟ ಮಾಡ್ತೇವೆ. ಹೆಣಕ್ಕೂ‌ ದುಡ್ಡು ಕಟ್ಟಬೇಕಂತೆ. ಚಿತಾಗಾರಗಳಲ್ಲಿ ಈ ಹಣ ಕಟ್ಟಬೇಕಂತೆ. ಹೆಣ ಹೂಳುವುದಕ್ಕೂ ಜಿಎಸ್​ಟಿ ಕಟ್ಟಬೇಕು ಅಂದರೆ ಹೇಗೆ? ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಮಾತನಾಡಿರುವುದು

ಇದೆಂಥಹ ನ್ಯಾಯ ರೀ ಸರ್ಕಾರದ್ದು? ಇಷ್ಟು ಕಿರುಕುಳ ಜನರಿಗೆ ಕೊಡ್ತಿದ್ದಾರೆ. ನಾಳೆ ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ ಮಾಡ್ತೇವೆ. ಬೆಂಗಳೂರಿನಲ್ಲಿ ನಾವು ಪ್ರತಿಭಟನೆ ಮಾಡ್ತೇವೆ. ನಂತರ ಜಿಎಸ್​ಟಿ ವಿರುದ್ಧ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಸರ್ಕಾರ ಸಂತೋಷವಾಗಿರೋದು ನಮಗೆ ಮುಖ್ಯವಲ್ಲ. ಜನರಿಗೆ ಏನು ಅನುಕೂಲ ಆಗುತ್ತೆ ಅದು ಮುಖ್ಯ. ಮೂರ್ನಾಲ್ಕು ವರ್ಷದಿಂದ ಜನರಿಗೆ ಆದಾಯವಿಲ್ಲ. ಆದಾಯವಿಲ್ಲದಿದ್ದರೂ ಹೆಚ್ಚಿನ ಹಣ ತೆರಬೇಕಿದೆ. ಜಿಎಸ್​ಟಿ ಹಾಕಿ ಜನರನ್ನ ಸಾಯಿಸ್ತಿದ್ದಾರೆ. ಬದುಕಿರುವಾಗಲೇ ವಿಷ ಕೊಟ್ಟು ಜನರನ್ನ ಸಾಯಿಸ್ತಿದ್ದಾರೆ. ಪ್ರತಿದಿನವೂ ಜನರಿಗೆ ಕಿರುಕುಳವೇ ಆಗಿದೆ.

ಪೆಟ್ರೋಲ್, ಗ್ಯಾಸ್ ಮೇಲೆ ಹೆಚ್ಚಿನ ಹಣ ತೆರಬೇಕು. ಹಾಲು, ಮೊಸರಿನ‌ ಮೇಲೂ‌ ಹಣ ವಸೂಲಿ ಮಾಡ್ತಾರೆ. ರೈತರಿಗೆ ಇದರಿಂದ ಏನೂ ಪ್ರಯೋಜನವಿಲ್ಲ. ರಸಗೊಬ್ಬರ, ಫೀಡ್ ಬೆಲೆ ಹೆಚ್ಚಳ ಮಾಡಿದ್ದಾರೆ. ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಜಿಎಸ್​ಟಿ ಹಾಕಿದ್ದಾರೆ. ಅಕ್ಕಿ, ಗೋದಿ, ಬಾರ್ಲಿ‌ ಮೇಲೂ ಟ್ಯಾಕ್ಸ್ ಹಾಕಿದ್ದಾರೆ. ಬೆಲ್ಲ, ಜೇನುತುಪ್ಪದ ಮೇಲೂ ಟ್ಯಾಕ್ಸ್ ಬಿದ್ದಿದೆ ಎಂದರು.

ಸಿಎಂ ಸಭೆ ಕರೆಯಬೇಕು:ಹೋಟೆಲ್​ ಮೇಲೂ ಶೇ 12ರಷ್ಟು ಜಿಎಸ್​ಟಿ ಹೆಚ್ಚಳ ಮಾಡಲಾಗಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಬ್ಯಾಂಕ್ ಚೆಕ್ ಬುಕ್ ಮೇಲೂ 18% ಹಾಕ್ತಾರೆ. ನಿಮ್ಮ‌ಹಣ ಪಡೆಯೋಕೆ ಶೇ 18ರಷ್ಟು ಜಿಎಸ್​ಟಿ ಕೊಡಬೇಕಂತೆ. ಈಗಾಗಲೇ ಎಟಿಎಂ ಎಲ್ಲದರಲ್ಲೂ ವಸೂಲಿ ಮಾಡ್ತಿದ್ದಾರೆ. ರೈತರ ಪಂಪ್ ಸೆಟ್ ಮೇಲೂ ಶೇ 18ರಷ್ಟು ತೆರಿಗೆ ಹೇರಲಾಗಿದೆ.

ಜನಸಾಮಾನ್ಯರು ಎಲ್ಲಿಂದ ಹಣ ತರಬೇಕು. ಬೇಸಿಗೆ ಅಗತ್ಯಗಳಿಗೆ ಇವರು ಜಿಎಸ್​ಟಿ ಹಾಕಿದ್ದಾರಲ್ಲ. ಕೂಡಲೇ ಸಿಎಂ ಸಭೆಯನ್ನ ಕರೆಯಬೇಕು. ನಿಮ್ಮ ಸರ್ಕಾರದಿಂದಲೇ ನೀವು‌ ತುಂಬಿಕೊಡಿ ಎಂದು ಆಗ್ರಹಿಸಿದರು.

ಹೋರಾಟ ನಡೆಸುತ್ತೇವೆ: ಸರ್ಕಾರ ಜನರಿಗೆ ಉದ್ಯೋಗ ಕೊಡ್ತಿಲ್ಲ. ಅವರು ಬದುಕುವುದಕ್ಕೆ ಅವಕಾಶ ನೀಡ್ತಿಲ್ಲ. ತಾವಾಗಿಯೇ ಬದುಕೋಕೆ ಹೊರಟ್ರೆ ಅದಕ್ಕೂ ಬಿಡ್ತಿಲ್ಲ. ಜಿಎಸ್​ಟಿ ವಿರುದ್ಧ ನಾಡಿದ್ದು ಪ್ರತಿಭಟನೆ ಮಾಡುತ್ತಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೇವೆ. ನಂತರ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದರು.

ಅವರು ಕನಸು ಕಾಣಲಿ: ಒಕ್ಕಲಿಗ ಸಮುದಾಯ ತಮಗೆ ಬೆಂಬಲಿಸಬೇಕೆಂಬ ಡಿಕೆಶಿ ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿಕೆ ವ್ಯಂಗ್ಯ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಪಾಪ ಅವರು ಕನಸು ಕಾಣಲಿ. ನನಗೆ ನನ್ನ ಪಾರ್ಟಿ ಮುಖ್ಯ. ನಾನು ನನ್ನ ಪಾರ್ಟಿಗೆ ಒತ್ತು ಕೊಡ್ತೇನೆ. ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಅದಕ್ಕೆ ರಾಮನಗರದಲ್ಲೂ ಕೇಳಿದ್ದೇನೆ.

ಬೆಟರ್ ಇದ್ದಿದ್ದಕ್ಕೆ ತಾನೇ ಗೆಲ್ಲಿಸಿದ್ದು: ಹೆಚ್. ಡಿ ಕೋಟೆಯಲ್ಲೂ ನಾನು ಸಮುದಾಯದ ಬೆಂಬಲ ಕೇಳಿದ್ದೇನೆ. ನಾನು ಕುಮಾರಸ್ವಾಮಿಗೆ ಉತ್ತರ ಕೊಡಬೇಕಿಲ್ಲ. ರಾಜ್ಯದ ಜನರಿಗೆ ನಾನು ಉತ್ತರ ಕೊಡ್ತೇನೆ. ನನ್ನನ್ನ 7 ಬಾರಿ ಕುಮಾರಸ್ವಾಮಿ ಗೆಲ್ಲಿಸಿದ್ರಾ? ನಾನು ಅವರಿಗಿಂತ ಬೆಟರ್ ಇದ್ದಿದ್ದಕ್ಕೆ ತಾನೇ ಗೆಲ್ಲಿಸಿದ್ದು. ಪಾಪ ಅವರಿಗೆ ಆಸೆ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ ಎಂದರು.

ತೀರ್ಮಾನ ಮಾಡ್ತಾರೆ: ರಾಮನಗರದಿಂದ ಸ್ಪರ್ಧೆ ಮಾಡಲಿ ಎಂಬ ಹೆಚ್​ಡಿಕೆ ಆಹ್ವಾನಕ್ಕೆ ಡಿಕೆಶಿ ತಿರುಗೇಟು ನೀಡಿ, ಅವರ ಜೊತೆ ಹಿಂದೆಯೇ ಜಂಗಿ ಕುಸ್ತಿ ಮಾಡಿಯಾಗಿದೆ. ಫಲಿತಾಂಶವೂ ಬಂದಿದೆ. ಜಂಗಿ ಕುಸ್ತಿ ಮಾಡಾಗಿದೆ. ಕೈ ಮೇಲೆ‌ ಎತ್ತಾಗಿದೆ. ಈಗ ನೀವುಗಳು ಜಂಗಿ ಕುಸ್ತಿ ಮಾಡಿಸುತ್ತಿದ್ದೀರಾ. ಹಿಂದೆ ನನ್ನ ತಮ್ಮನ ವಿರುದ್ದ ಅವರ ಶ್ರೀಮತಿಯವರು ಸ್ಪರ್ಧೆ ಮಾಡಿದ್ದರು. ಫಲಿತಾಂಶ ಬಂದಿದೆಯಲ್ಲ ಏನಾಯ್ತು? ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುವುದು ಪಕ್ಷದ ಹೈಕಮಾಂಡ್, ಸೋನಿಯಾ ಗಾಂಧಿಯವರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ಸಭೆ ನಡೆಸಿದ ಡಿಕೆಶಿ:ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಪಕ್ಷದ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿದರು. ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್, ಮಾಜಿ ಸಚಿವರಾದ ತನ್ವೀರ್​ ಸೇಠ್, ಯು. ಟಿ ಖಾದರ್ ಹಾಗೂ ನಾಸೀರ್ ಅಹ್ಮದ್, ಇಕ್ಬಾಲ್ ಅನ್ಸಾರಿ ಮತ್ತಿತರರು ಭಾಗವಹಿಸಿದ್ದರು.

ಓದಿ:ಪ್ರವಾಹದಿಂದ ಬುಡಮೇಲಾದ ವ್ಯವಸಾಯ: ಮನೆ ಮಹಡಿ ಮೇಲೆ ಭತ್ತ ಬಿತ್ತನೆ !

ABOUT THE AUTHOR

...view details