ಬೆಂಗಳೂರು:'ಸೈಬರ್ ಸುರಕ್ಷಿತ ಕರ್ನಾಟಕ' ಅಭಿಯಾನಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸೈಬರ್ ಕ್ರೈಂ ತಡೆಗಟ್ಟುವ ಸಲುವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವ ಪೀಳಿಗೆಗೆ ತರಬೇತಿ ನೀಡಲು ಸೈಬರ್ ಸುರಕ್ಷಿತ ಕರ್ನಾಟಕ ಅಭಿಯಾನ ಕೈಗೊಳ್ಳಲಾಗಿದೆ.
ಇದೇ ವೇಳೆ ಮಾತನಾಡಿದ ಸಿಎಂ, ಸೈಬರ್ ಕ್ರೈಂಗೂ ಫಿಸಿಕಲ್ ಕ್ರೈಂಗೂ ವ್ಯತ್ಯಾಸ ಇದೆ. ಸರ್ಕಾರದ ಇಲಾಖೆಗಳಲ್ಲೂ ಸೈಬರ್ ಕ್ರೈಂಗಳಾಗಿರೋ ಉದಾಹರಣೆ ಇದ್ದಾವೆ. ನನ್ನ ಸುರಕ್ಷತೆಯನ್ನು ಹೇಗೆ ಮಾಡಿಕೊಳ್ಳುತ್ತೇನೋ, ಅದೇ ರೀತಿ ನನ್ನ ಡಿಜಿಟಲ್ ಸುರಕ್ಷತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಬಹಳಷ್ಟು ಜನರು ಮೊಬೈಲ್ ಸೇರಿದಂತೆ ಡಿಜಿಟಲ್ ವಸ್ತುಗಳನ್ನು ಬಳಸುತ್ತಾರೆ.
ಆದರೆ, ಬಹಳಷ್ಟು ಜನ ವಿದ್ಯಾವಂತರಿಗೂ ಸೈಬರ್ ಸುರಕ್ಷತೆ ಬಗ್ಗೆ ಗೊತ್ತಾಗುವುದಿಲ್ಲ. ಬೆಂಗಳೂರಿನ ಎಫ್ಎಸ್ಎಲ್ ಕೇಂದ್ರ ಹೊಸ ಟೆಕ್ನಾಲಜಿಯನ್ನ ಹೊಂದಿದ್ದು, ಸೈಬರ್ ಪ್ರಕರಣಗಳನ್ನು ಪತ್ತೆ ಹಚ್ಚಲು ನಮ್ಮ ಕರ್ನಾಟಕ ಪೊಲೀಸರು ಸಮರ್ಥರಿದ್ದಾರೆ. ಯುವಕರ ಸುರಕ್ಷತೆಗೆ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಡ್ರಗ್ಸ್‌ಗೆ ಕಡಿವಾಣ ಹಾಕುತ್ತಿದೆ ಎಂದು ತಿಳಿಸಿದರು.
ಸೈಬರ್ ಮೂಲಕವೇ ನಡೆಯವ ಡಾರ್ಕ್ ವೆಬ್ ಗೂ ಕಡಿವಾಣ ಹಾಕುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕ. ಸೈಬರ್ ಪೊಲೀಸ್ ಠಾಣೆಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುತ್ತದೆ. ಸೈಬರ್ ಕ್ರೈಂ ತಡೆಗಟ್ಟುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸೈಬರ್ ಕ್ರೈಂಗೆ ಸಾಕಷ್ಟು ಬಡ ಕುಟುಂಬಗಳು ನಾಶವಾಗುತ್ತಿವೆ. ಸೈಬರ್ ಕ್ರೈಮ್ ಅನ್ನೋದು ವೈರಸ್ ಇದ್ದಂತೆ, ಅದನ್ನು ಸದೆ ಬಡೆಯಲು ನಮ್ಮ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಎಲ್ಲ ರೀತಿಯ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.