ಬೆಂಗಳೂರು: ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುವುದನ್ನು ಬಿಡಿ. ಈಗ ನಿಮ್ಮ ಕೈಯಲ್ಲೇ ಅಧಿಕಾರವಿದೆ. 40 ಪರ್ಸೆಂಟ್ ಕಮೀಷನ್ ಆರೋಪ, ಪೇ ಸಿಎಂ ಅಭಿಯಾನವನ್ನೆಲ್ಲ ಮಾಡಿದ್ದ ನೀವು ಈಗ ತನಿಖೆ ಮಾಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸವಾಲೆಸೆದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಒಂದಿಷ್ಟು ಆರೋಪಗಳನ್ನು ನಮ್ಮ ಮೇಲೆ ಮಾಡಿದ್ದರು. ಅದನ್ನೆಲ್ಲ ಈಗ ಸಾಬೀತು ಮಾಡಿ ತೋರಿಸಲಿ. ಅರ್ಕಾವತಿ ಪ್ರಕರಣದಲ್ಲಿ ಅಕ್ರಮ ಆಗಿದೆ, ಅಕ್ರಮ ಮಾಡಿದವರಾರು? ಅದರ ಬಗ್ಗೆ ತನಿಖೆ ಮಾಡಿ, ಸೋಲಾರ್ ಹಗರಣ ಕೇಳಿ ಬಂತು, ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿ ಆರೋಪ ಇತ್ತು, ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿಸಿದ ಖದೀಮ ಯಾರು? ತನಿಖೆ ಮಾಡಿ, ಪೇ ಸಿಎಂ ಪೋಸ್ಟರ್ ಅಂಟಿಸಿದಿರಿ, 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದಿರಿ, ಇವತ್ತು ನಿಮಗೆ ಅಧಿಕಾರ ಇದೆ, ತನಿಖೆ ಮಾಡಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:'ಅರ್ಥರಹಿತ ಮಾತುಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ': ಪ್ರತಾಪ್ ಸಿಂಹಗೆ ಸಚಿವ ಹೆಚ್.ಸಿ.ಮಹದೇವಪ್ಪ ಟಾಂಗ್
ನಮ್ಮಿಂದ ತಪ್ಪಾಗಿದೆ, ನಮ್ಮ ಸರ್ಕಾರ ತಪ್ಪು ಮಾಡಿದೆ ಎನ್ನುತ್ತೀರಲ್ಲ, ಅರ್ಕಾವತಿ ಹಗರಣ 8 ಸಾವಿರ ಕೋಟಿ ತಿಂದ ಖದೀಮ ಯಾರು ಎಂದು ಗೊತ್ತಾಗಬೇಕಲ್ಲ. ನಿಮ್ಮನ್ನು ನೀವು ಸಾಬೀತು ಮಾಡಿಕೊಳ್ಳಲಾದರೂ ತನಿಖೆ ಮಾಡಿ. ಕೆಂಪಣ್ಣ ವರದಿ ಟೇಬಲ್ ಮಾಡಿ. ಪೊಲೀಸ್ ನೇಮಕಾತಿ ಹಗರಣ ಆಗಿದೆ ಎಂದು ಈಗ ನೀವು ಬೇರೆಯವರ ಮೇಲೆ ಆರೋಪ ಮಾಡುವಂತಿಲ್ಲ, ನಿಮ್ಮ ಕೈಯಲ್ಲೇ ಎಲ್ಲಾ ಇದೆ, ತನಿಖೆ ಮಾಡಿ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಸಿ.ಟಿ.ರವಿ ಒತ್ತಾಯಿಸಿದರು.
ಡಬಲ್ ಇಂಜಿನ್ನಲ್ಲಿ ಒಂದನ್ನು ಶೆಡ್ಡಿಗೆ ಕಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇಡೀ ದೇಶವನ್ನೇ ಶೆಡ್ಡಿಗೆ ಕಳಿಸಬೇಕು ಎನ್ನುವುದು ಅವರ ಪ್ಲಾನ್. ಕೆಲ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಸೇರಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಆದರೆ, ಇದು ಯಾವುದೇ ಕಾರಣಕ್ಕೂ ಆಗಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಪ್ರಧಾನಿಗಳು ಪ್ರಧಾನ ಸೇವಕರಾಗಿ ಮೂವತ್ತು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಪರ್ಕ ಅಭಿಯಾನ ಮಾಡಲಾಗುತ್ತದೆ. 28 ಲೋಕಸಭೆ ಕ್ಷೇತ್ರಗಳಲ್ಲೂ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್, ರಾಷ್ಟ್ರೀಯ ಪದಾಧಿಕಾರಿಗಳು, ನಿರ್ಮಲಾ ಸೀತಾರಾಮನ್ ಮುಂತಾದವರು ಪ್ರವಾಸ ಮಾಡುತ್ತಾರೆ. ಮಹಾಜನ ಸಂಪರ್ಕ ಅಭಿಯಾನ ಲೋಕಸಭೆ ಚುನಾವಣೆಗೆ ತಾಲೀಮಿನ ಭಾಗವಾಗಿದೆ ಎಂದರು.
ಇದನ್ನೂ ಓದಿ:ಪ್ರಧಾನಿ ಮೋದಿ ಐರನ್ ಲೆಗ್, ಅವರು ಹೋದಲ್ಲೆಲ್ಲಾ ಬಿಜೆಪಿಗೆ ಸೋಲಾಗಿದೆ: ವಿ.ಎಸ್. ಉಗ್ರಪ್ಪ