ಬೆಂಗಳೂರು: ಬನ್ನೇರುಘಟ್ಟದ ಕಗ್ಗಲೀಪುರ ಮುಖ್ಯರಸ್ತೆಯ ಸಿಆರ್‌ಪಿಎಫ್ ಡಾಗ್ ಸ್ಕ್ವಾಡ್ ಕೇಂದ್ರದ ಬಳಿ ಯೋಧನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೆಚ್.ಎನ್.ಸಿಂಗ್ (33) ಮೃತರು. ಶನಿವಾರ ಬೆಳಗ್ಗೆ ಸೇನಾ ಕೇಂದ್ರದಲ್ಲಿ ವಾಕಿಂಗ್ ಮತ್ತು ಜಾಗಿಂಗ್ನಲ್ಲಿ ತೊಡಗಿದ್ದ ಸಿಂಗ್ ಮೇಲೆ ಆನೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.
ಯೋಧ ಹೆಚ್.ಎನ್.ಸಿಂಗ್ ಗಾಯಗಳಿಂದ ನೆಲಕ್ಕೆ ಬಿದ್ದಿರುವುದನ್ನು ಸಹೋದ್ಯೋಗಿಗಳು ಗಮನಿಸಿದ್ದಾರೆ. ಕೂಡಲೇ ತಲಘಟ್ಟಪುರ ಪೊಲೀಸರು ಹಾಗು ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕಗ್ಗಲೀಪುರ ವಲಯ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಕಾಡಾನೆ ದಾಳಿಗೆ ರೈತ ಬಲಿ:ಕೆಲವು ದಿನಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ದನ ಮೇಯಿಸಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೊಳ್ಳೆಪುರ ದೊಡ್ಡಿ ಗ್ರಾಮದ ಬಳಿ ನಡೆದಿತ್ತು. ಸೊಳ್ಳೆಪುರ ದೊಡ್ಡಿ ನಿವಾಸಿ ಅಲಗಪ್ಪ ಮೃತಪಟ್ಟಿದ್ದರು. ದನಗಳನ್ನು ಮೇಯಿಸಲೆಂದು ಹಲಗಪ್ಪ ನಿತ್ಯ ಕಾಡಿಗೆ ಹೋಗುತ್ತಿದ್ದರು. ಎಂದಿನಂತೆ ಹೋಗಿದ್ದಾಗ ಆನೆ ದಾಳಿ ನಡೆಸಿದೆ.