ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೆರಳಿದ ಕಡೆಯಲ್ಲೆಲ್ಲ ಜನ ಸೇರ್ತಾರೆ ಅನ್ನೋದು ಇಂದು ಮತ್ತೊಮ್ಮೆ ಸಾಬೀತಾಯಿತು. ಕೊರೊನಾ ಆತಂಕ ಹಿನ್ನೆಲೆ ಯಾವುದೇ ಸಮಾರಂಭವಿರಲಿ 150ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ ಎಂಬ ಆದೇಶವಿದೆ.
ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸೇರಿದ ಜನರು ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಆರಂಭದಿಂದಲೂ ಇಂದಿನವರೆಗೂ ಕೋವಿಡ್ ಆತಂಕದ ನಡುವೆಯೂ ಮಾಸ್ಕ್ ಧರಿಸದೇ ಜನಸಮುದಾಯದ ಮಧ್ಯೆ ಓಡಾಡುವುದು ಹಾಗೂ ತಾವು ಹೋದಲ್ಲೆಲ್ಲಾ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವುದು ಡಿಕೆಶಿ ಬೆಳೆಸಿಕೊಂಡು ಬಂದ ರೂಢಿ.
ಇಂದಿನ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿಯೂ ಇದು ಮರುಕಳಿಸಿತು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ನವೀಕರಣಕೊಳ್ಳುತ್ತಿರುವ ಹಿನ್ನೆಲೆ 74ನೇ ಸ್ವಾತಂತ್ರೋತ್ಸವ ಸಮಾರಂಭವನ್ನು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿತ್ತು. ಸಾಕಷ್ಟು ವಿಶಾಲವಾಗಿದ್ದರೂ ಸಹ, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಆಗಮಿಸಿದ್ದ ಹಿನ್ನೆಲೆ ಕಾಂಗ್ರೆಸ್ ಭವನದ ಆವರಣ ಕೂಡ ತುಂಬಿ ತುಳುಕಿತು.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಯಾವ ಅವಕಾಶವೂ ಇಲ್ಲಿ ಒದಗಿಬರಲಿಲ್ಲ. ಜೊತೆಗೆ ಸಾಕಷ್ಟು ಮಂದಿ ಮಾಸ್ಕ್ ಧರಿಸದೇ ಗುಂಪುಗುಂಪಾಗಿ ನಿಂತಿದ್ದು ಗೋಚರಿಸಿತು. ಬೆಂಗಳೂರು ಮಹಾನಗರದಲ್ಲಿ ನಿತ್ಯ ಎರಡು ಸಾವಿರದಷ್ಟು ಕೋವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಆದರೆ, ಇಂಥದ್ದೊಂದು ಆತಂಕದ ವಾತಾವರಣ ಕಾಂಗ್ರೆಸ್ ಭವನದಲ್ಲಿ ಇಂದು ಕಾಣಲಿಲ್ಲ.
ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸೇರಿದ ಜನ ಒಟ್ಟಾರೆ ರಾಜ್ಯ ದಿನದಿಂದ ದಿನಕ್ಕೆ ಕೊರೊನಾ ಆತಂಕದಿಂದ ಕಾಣುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಡೆದುಕೊಳ್ಳಬೇಕೆಂದು ಕಾಂಗ್ರೆಸ್ ಮತ್ತೊಮ್ಮೆ ಎಡವಿದ್ದು ಕಂಡುಬಂತು. ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಸಮಾರಂಭದಲ್ಲಿ ಪಾಲ್ಗೊಂಡು ಸರ್ಕಾರದ ನಿಯಮ ಮುರಿದದ್ದು ಗೋಚರಿಸಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೊಮ್ಮೆ ತಾವು ಹೋದಲ್ಲೆಲ್ಲ ಜನರನ್ನು ಸೇರಿಸುವ ಸಂಪ್ರದಾಯವನ್ನು ಮುಂದುವರಿಸಿದರು.