ಬೆಂಗಳೂರು : ಚಾಮರಾಜಪೇಟೆಯಲ್ಲಿ ನಿಲ್ಲಿಸಿದ್ದ 12 ಚಕ್ರದ ಲಾರಿ ಕಳ್ಳತನ ಮಾಡಿದ್ದ ಖದೀಮನನ್ನು 278 ಸಿಸಿಟಿವಿ ಕ್ಯಾಮರಾಗಳ ಸಹಾಯದಿಂದ ತಮಿಳುನಾಡಿನಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ವಿ.ವಿ.ಪುರ ಪೊಲೀಸರು ಯಶಸ್ವು ಕಂಡಿದ್ದಾರೆ. ತಮಿಳುನಾಡು ಮೂಲದ ಮುತ್ತುರಾಜ್ ಬಂಧಿತ ಆರೋಪಿ. ಈತನಿಂದ 1.50 ಕೋಟಿ ರೂ. ಮೌಲ್ಯದ ಮೂರು ಲಾರಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಮುತ್ತುರಾಜ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ನಡುವೆ ಐಷಾರಾಮಿ ಜೀವನ ನಡೆಸಲು ಕಳ್ಳತನಕ್ಕೆ ಇಳಿದಿದ್ದ. ತಮಿಳುನಾಡಿನಲ್ಲಿರುವ ತನ್ನ ಸಹಚರರಿಗೆ ಕದ್ದ ವಾಹನಗಳನ್ನು ಮಾರಾಟ ಮಾಡುತ್ತಿದ್ದ. ಒಬ್ಬ ಸಹಚರ ಕದ್ದ ಲಾರಿಯ ಇಂಜಿನ್ ನಂಬರ್ ಮತ್ತು ಚಾಸಿಸ್ ನಂಬರ್ ಬದಲಾಯಿಸಿದರೆ, ಮತ್ತೊಬ್ಬ ದಾಖಲಾತಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದನಂತೆ. ಬಂದ ದುಡ್ಡನ್ನು ಮೂವರೂ ಹಂಚಿಕೊಳ್ಳುತ್ತಿದ್ದರು. ಇದೇ ರೀತಿ ತಮಿಳುನಾಡಿನಲ್ಲಿ 2 ಲಾರಿಗಳನ್ನು ಕದ್ದು ಮಾರಾಟ ಮಾಡಿದ್ದಾರೆ.
ಇದನ್ನೂ ಓದಿ :ಲಾರಿ ಅಡ್ಡಗಟ್ಟಿ 6 ಕೋಟಿ ರೂ. ಮೌಲ್ಯದ ಮೊಬೈಲ್ಗಳ ಕಳ್ಳತನ : ಖದೀಮರಿಗೆ ಬಲೆ ಬೀಸಿದ ಪೊಲೀಸರು
ಹರಿಪಾಲ ಎಂಬವರು ತಮ್ಮ ಲಾರಿಯನ್ನು ಜ.14 ರಂದು ರಾತ್ರಿ ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡಿದ್ದರು. ಇತ್ತ ತಮಿಳುನಾಡಿನಿಂದ ಲಾರಿ ಕದಿಯಲೆಂದು ಬೆಂಗಳೂರಿಗೆ ಬಂದಿದ್ದ ಮುತ್ತುರಾಜ್ ಈ ಲಾರಿಯನ್ನು ಗಮನಿಸಿದ್ದಾನೆ. ನಕಲಿ ಕೀ ಬಳಸಿ ಲಾರಿ ಸ್ಟಾರ್ಟ್ ಮಾಡಿ ಹೊಸೂರು ಮಾರ್ಗವಾಗಿ ಚೆನ್ನೈಗೆ ತೆರಳಿದ್ದ. ಲಾರಿಯನ್ನು ಸಹಚರರಿಗೆ ಒಪ್ಪಿಸಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ.ಗೆ ಮಾರಾಟ ಕೂಡಾ ಮಾಡಿಸಿದ್ದ. ಲಾರಿ ಮಾಲೀಕ ವಿ.ವಿ.ಪುರ ಪೊಲೀಸರಿಗೆ ದೂರು ನೀಡಿದ್ದರು.