ಕರ್ನಾಟಕ

karnataka

ETV Bharat / state

ರಾಜ್ಯದ ಹಾಲಿ ಸಂಸದರು, ಅಭ್ಯರ್ಥಿಗಳ ವಿರುದ್ಧದ ಕ್ರೈಂ ಹಿನ್ನೆಲೆ ಹೀಗಿದೆ ನೋಡಿ

ಮತದಾರರ ಮನವೊಲಿಕೆಗೆ ನಾನಾ ಕಸರತ್ತು ಮಾಡುವ ಕೆಲ ಪ್ರಮುಖ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ‌ಸಂಬಂಧ ಇನ್ನೂ ಕೋರ್ಟಿನಲ್ಲಿ ವಿಚಾರಣೆಗಳು ನಡೆಯುತ್ತಿವೆ. ಈ ಕುರಿತು ಚುನಾವಣಾ ಆಯೋಗದ ಘೋಷಣಾ ಪತ್ರದಲ್ಲಿ ತಿಳಿಸಲಾಗಿದೆ.

By

Published : Apr 15, 2019, 7:48 PM IST

ಪ್ರಮುಖ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ಲೋಕ ಸಮರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅಭ್ಯರ್ಥಿಗಳಿಂದ ಸಮರೋಪಾದಿಯಲ್ಲಿ ಮತಬೇಟೆ ಕೂಡ ನಡೆಯುತ್ತಿದೆ. ರಣಕಣದಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲು ಮುಂದಾಗಿರುವ ಅಭ್ಯರ್ಥಿಗಳ ವಿರುದ್ಧ ಯಾವೆಲ್ಲ ಪ್ರಕರಣಗಳಿವೆ ಅನ್ನೋದರ ಕಂಪ್ಲೀಟ್​ ಮಾಹಿತಿ ತಿಳಿಯಲು ಮುಂದೆ ಓದಿ...

ರಾಜ್ಯದಲ್ಲಿ ಮೊದಲ ಹಂತದ ಲೋಕಸಮರ‌ ಎ.18 ಕ್ಕೆ ‌ನಡೆಯಲಿದೆ. ಇತ್ತ ಕಣದಲ್ಲಿರುವ ಅಭ್ಯರ್ಥಿಗಳು ಬೆವರಿಳಿಸಿ ಹಗಲು, ರಾತ್ರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರ ಮನವೊಲಿಸಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮತಬೇಟೆಗಿಳಿದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪ್ರಜ್ಞಾವಂತ ಮತದಾರರು ಎಲ್ಲ ಮಾನದಂಡವನ್ನು ಅವಲೋಕಿಸುತ್ತಾರೆ.

ರಾಜ್ಯದಲ್ಲಿ ಲೋಕ ಸಮರದ ಜಿದ್ದಾಜಿದ್ದಿ ತಾರಕಕ್ಕೇರಿದೆ. ಒಬ್ಬರನ್ನೊಬ್ಬರು ಪರಸ್ಪರ ತೆಗಳಿ ಮತದಾರರ ಮನ ಗೆಲ್ಲುವ ಕೆಲಸವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಹೀಗೆ ಮತದಾರರ ಮನವೊಲಿಕೆಗೆ ನಾನಾ ಕಸರತ್ತು ನಡೆಸುತ್ತಿರುವ ಕೆಲ ಪ್ರಮುಖ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ‌ಸಂಬಂಧ ಇನ್ನೂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ಚುನಾವಣಾ ಆಯೋಗದ ಘೋಷಣಾ ಪತ್ರದಲ್ಲಿ ಈ ವಿಷಯದ ಬಹಿರಂಗಪಡಿಸಲಾಗಿದೆ.

ಪ್ರಮುಖ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು

ರಾಜ್ಯದಲ್ಲಿನ‌ ಹಾಲಿ‌ ಸಂಸದರ ಪೈಕಿ 9 ಸಂಸದರ ವಿರುದ್ಧ ಅಪರಾಧ ಪ್ರಕರಣಗಳಿದ್ದು, 5 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದೆ. ಚುನಾವಣೆ ಸಂಬಂಧ ಹಾಲಿ ಸಂಸದರ ಅಫಿಡವಿಟ್​ನಲ್ಲಿ ಘೋಷಿಸಿರುವ ಅಪರಾಧ ಪ್ರಕರಣಗಳ ಪೈಕಿ ಸುಮಾರು 32 ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

ಅಭ್ಯರ್ಥಿಗಳ ಕ್ರೈಂ ಡೈರಿ ಮಾಹಿತಿ:

  • ಡಿ.ಕೆ. ಸುರೇಶ್:

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಗರಿಷ್ಠ ಪ್ರಮಾಣದ ಪ್ರಕರಣಗಳು ದಾಖಲಾಗಿವೆ. ಡಿ.ಕೆ. ಸುರೇಶ್ ವಿರುದ್ಧ ಸುಮಾರು 8 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಸಾತನೂರು ಅರಣ್ಯ ವಲಯಗಳಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಭೂ ಒತ್ತುವರಿ ಪ್ರಕರಣಗಳು ಡಿ.ಕೆ. ಸುರೇಶ್ ವಿರುದ್ಧದ ಪ್ರಮುಖ ಪ್ರಕರಣಗಳಾಗಿವೆ.

  • ಅನಂತ ಕುಮಾರ್ ಹೆಗಡೆ:

ಇನ್ನು ಬಿಜೆಪಿಯ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧವೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧದ ಘೋಷಿತ ಕ್ರಿಮಿನಲ್ ಕೇಸ್​ಗಳು 4. ಈ ಪೈಕಿ ಬಹುತೇಕ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಹೆಗಡೆ ವಿರುದ್ಧದ ಗಂಭೀರ ಪ್ರಕರಣ. ಐಪಿಸಿ ಕಾಯ್ದೆ 4, 506, 341, 34, 323,153ಎ, 504, 125 ರ ಅಡಿ ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಎಲ್ಲ ಪ್ರಕರಣಗಳು ಕೋಮು ಸೌಹಾರ್ದತೆ ಕದಡುವ ಪ್ರಕರಣಗಳಾಗಿವೆ.

  • ನಳಿನ್ ಕುಮಾರ್ ಕಟೀಲು:

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಕೂಡ ಕ್ರಿಮಿನಲ್ ಕೇಸ್​ಗಳ ಪೈಕಿ ಹಿಂದೆ ಬಿದ್ದಿಲ್ಲ. ಅವರ ವಿರುದ್ಧ ಒಟ್ಟು 4 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ವೈಯಕ್ತಿಕ ನಿಂದನೆ ಪ್ರಮುಖವಾಗಿವೆ. ಅವರ ವಿರುದ್ಧ ಐಪಿಸಿ 123, 186, 188, 268, 106, 108, 353, 506 ಅಡಿ ಪ್ರಕರಣಗಳು ದಾಖಲಾಗಿವೆ.

  • ಪ್ರತಾಪ್ ಸಿಂಹ:

ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧ 3 ಪ್ರಕರಣಗಳು ದಾಖಲಾಗಿವೆ. ಹನುಮ ಜಯಂತಿ ಪ್ರಯುಕ್ತ ನಿಷೇಧಾಜ್ಞೆ ಉಲ್ಲಂಘನೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ನೀತಿ ಸಂಹಿತೆ ಉಲ್ಲಂಘನೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರಾಜ್ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿರುವುದು ಪ್ರಮುಖ ಪ್ರಕರಣಗಳಾಗಿವೆ. ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 279, 353, 188, 332 ಅಡಿ ಪ್ರಕರಣಗಳು ದಾಖಲಾಗಿವೆ. ಜತೆಗೆ ಸೆಕ್ಷನ್ 127ಎ, 499, 500 ಅಡಿ ಕೇಸ್​ಗಳು ದಾಖಲಾಗಿವೆ.

  • ಶೋಭಾ ಕರಂದ್ಲಾಜೆ:

ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು 3 ಪ್ರಕರಣಗಳು ದಾಖಲಾಗಿವೆ. ಹೊನ್ನಾವರ ಪೊಲೀಸ್ ಸ್ಟೇಷನ್​ನಲ್ಲಿ ಪ್ರಚೋದನಾಕಾರಿ ಹೇಳಿಕೆ ಸಂಬಂಧ ಪ್ರಕರಣ ದಾಖಲಾಗಿದೆ. ಸೆಕ್ಷನ್ 153ಎ, 153, 505(2) ಕೇಸ್​ ದಾಖಲಾಗಿವೆ. ಇನ್ನು ಶಾಸಕ ರೋಷನ್ ಬೇಗ್ ಅವರು ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದರ ಜತೆಗೆ ನಕಲಿ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಆರೋಪದಡಿ ಜಾರಿ ನಿರ್ದೇಶನಾಲಯದಲ್ಲೂ ಪ್ರಕರಣ ದಾಖಲಾಗಿವೆ.

  • ಪ್ರಹ್ಲಾದ್ ಜೋಶಿ:

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ 1 ಕ್ರಿಮನಲ್ ಕೇಸ್ ದಾಖಲಾಗಿದೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಸಂಬಂಧ ಪ್ರಕರಣ ದಾಖಲಾಗಿದೆ. ಐಪಿಸಿ ಕಾಯ್ದೆ 153ಎ, 298 ಅಡಿ ಪ್ರಕರಣ ದಾಖಲಾಗಿವೆ.

  • ಕೆ.ಹೆಚ್. ಮುನಿಯಪ್ಪ:

ಕೋಲಾರ ಹಾಲಿ ಸಂಸದ ಕೆ.ಹೆಚ್. ಮುನಿಯಪ್ಪ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಕೋಲಾರದ ರಾಬರ್ಟಸನ್ ಪೇಟೆ ಠಾಣೆಯಲ್ಲಿ ಜಾತಿ ನಿಂದನೆ ಸಂಬಂಧ ಪ್ರಕರಣ ದಾಖಲಾಗಿದೆ. ಐಪಿಸಿ 1860, u/s 323, 341, 504, 34, 57 ಅಡಿ ಕೇಸ್​ಗಳಿವೆ.

  • ಬಿ.ವೈ.ರಾಘವೇಂದ್ರ:

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ವಿರುದ್ಧ 2 ಪ್ರಕರಣಗಳಿವೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ರಾಘವೇಂದ್ರ ವಿರುದ್ಧ ಖಾಸಗಿ ದೂರು ದಾಖಲಾಗಿದೆ. ಇನ್ನು ಬೆಂಗಳೂರಿನ ಇಡಿಯಲ್ಲಿ ಅಕ್ರಮ ಹಣ ಸಂಗ್ರಹಣೆ ಆರೋಪದಿ ಕೇಸ್ ದಾಖಲಾಗಿದೆ.

  • ಎಸ್.ಮುನಿಸ್ವಾಮಿ:

ಕೋಲಾರ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ವಿರುದ್ಧ 2 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ವೈಟ್ ಫೀಲ್ಡ್, ಹೆಚ್ಎಎಲ್ ಠಾಣೆಗಳಲ್ಲಿ ಮುನಿಸ್ವಾಮಿ ವಿರುದ್ಧ ಪ್ರಕರಣಗಳಿವೆ. ಅಕ್ರಮ ಪ್ರತಿರೋಧ ಹಿನ್ನೆಲೆ ಅವರ ವಿರುದ್ಧ ಐಪಿಸಿ 341, 34 ಅಡಿ ಕೇಸ್ ದಾಖಲಾಗಿವೆ. ಇನ್ನು ಹೆಚ್ಎಎಲ್ ಠಾಣೆಯಲ್ಲಿ ದೊಂಬಿ ಸಂಬಂಧ ಸೆಕ್ಷನ್ 341, 143, 147, 149, 283 ಅಡಿ ಪ್ರಕರಣಗಳು ದಾಖಲಾಗಿವೆ.

  • ಪ್ರಕಾಶ್ ರಾಜ್:

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ್ ರಾಜ್ ವಿರುದ್ಧವೂ 1 ಪ್ರಕರಣ ಇದೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೊಂಬಿ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಕಳೆದ ವರ್ಷ ಡಿಸೆಂಬರ್​ನಲ್ಲಿ ಪೊಲೀಸರು ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದಾರೆ.

  • ಪ್ರಮೋದ್ ಮದ್ವರಾಜ್:

ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ವಿರುದ್ಧ ಹೆಬ್ರಿ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪ್ರಕರಣವೊಂದು ದಾಖಲಾಗಿದೆ.

  • ಆನಂದ್ ಅಸ್ನೋಟಿಕರ್:

ಇತ್ತ ಉತ್ತರ ಕನ್ನಡ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ವಿರುದ್ಧ ಕುಮಾರಪಟ್ಟಣಂ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ABOUT THE AUTHOR

...view details