ಬೆಂಗಳೂರು: ಮಹಿಳೆಗೆ ನಿಂದಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಬೆಳ್ಳಂದೂರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಮೇಲೆ ಹಲ್ಲೆ ಮಾಡಿರುವುದಾಗಿ ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಕ್ಯಾಬ್ ಚಾಲಕ ಬಸವರಾಜ್ ಎಂಬಾತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಳ್ಳಂದೂರಿನ ಬೋಗನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಮಹಿಳೆಯ ಕುಟುಂಬ ವಾಸವಾಗಿದೆ. ಮಗನ ಚಿಕಿತ್ಸೆ ಸಲುವಾಗಿ ಬುಧವಾರ ಬೋಗನಹಳ್ಳಿಯಿಂದ ಮಣಿಪಾಲ್ ಆಸ್ಪತ್ರೆಗೆ ತೆರಳಲು ಮಹಿಳೆಯು ಕ್ಯಾಬ್ ಬುಕ್ ಮಾಡಿದ್ದರು. ಅಪಾರ್ಟ್ಮೆಂಟ್ನಿಂದ ಹೊರಬರುತ್ತಿದ್ದಂತೆ ಬಂದ ಕ್ಯಾಬ್ನ್ನು ತಾಯಿ-ಮಗ ಹತ್ತಿಕೊಂಡು ತೆರಳಿದ್ದು, ಆದರೆ ಸುಮಾರು ನೂರು ಮೀಟರ್ ದೂರದವರೆಗೆ ಹೋಗುವಷ್ಟರಲ್ಲಿ ತಾನು ಬುಕ್ ಮಾಡಿದ ಕ್ಯಾಬ್ ಇದಲ್ಲ ಎಂಬುದು ಮಹಿಳೆಯ ಅರಿವಿಗೆ ಬಂದಿದೆ. ಹೀಗಾಗಿ, ಕೂಡಲೇ ಕ್ಯಾಬ್ ನಿಲ್ಲಿಸುವಂತೆ ಚಾಲಕನಿಗೆ ಕೇಳಿಕೊಂಡಿದ್ದಾರೆ. ಆದರೆ ಇದರಿಂದ ಅಸಮಾಧಾನಗೊಂಡ ಚಾಲಕ ಮಹಿಳೆ ಮಾತಿನ ಚಕಮಕಿ ನಡೆಸಿದ್ದಾನೆ. ಕಾರಿನಿಂದ ಇಳಿಯುತ್ತಿದ್ದಂತೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಾಲಕನು ಮಹಿಳೆ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಯು ಕಿರುಚಾಡುತ್ತಿದ್ದಂತೆ ಅಪಾರ್ಟ್ ಮೆಂಟ್ ನಿವಾಸಿಗಳು ಅವರ ನೆರವಿಗೆ ಧಾವಿಸಿದ್ದಾರೆ. ಆದರೆ ಜನರು ಬರುಷ್ಟರಲ್ಲೇ ಕ್ಯಾಬ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಕ್ಯಾಬ್ ಚಾಲಕನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆ ಮೇಲೆ ಹಲ್ಲೆಗೆ ಕಾರಣ?:ಬುಧವಾರ ಒಂದೇ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಇಬ್ಬರಿಂದ ಎರಡು ಕ್ಯಾಬ್ ಬುಕ್ ಆಗಿದ್ದವು. ಹಲ್ಲೆಗೊಳಗಾದ ಮಹಿಳೆ ಬುಕ್ ಮಾಡಿರುವುದು ಬೇರೆ ಕ್ಯಾಬ್ ಆಗಿತ್ತು. ಆದರೆ, ಮಹಿಳೆಯು ತಾನು ಹೊರಬಂದ ಕೂಡಲೇ ಬಂದ ಆರೋಪಿತ ಬಸವರಾಜ್ ಚಲಾಯಿಸುತ್ತಿದ್ದ ಕ್ಯಾಬ್ ಹತ್ತಿದ್ದರು. ಕೇವಲ 100 ಮೀಟರ್ ದೂರದವರೆಗೆ ತೆರಳುತ್ತಲೇ ಕ್ಯಾಬ್ ನಿಲ್ಲಿಸುವಂತೆ ಚಾಲಕನಿಗೆ ಮಹಿಳೆ ಹೇಳಿದ್ದಾರೆ. ಈ ವೇಳೆ ಕಾರಿನಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಕೆಳಗಿಳಿದ ಮಹಿಳೆ ಕಾರಿನ ಬಾಗಿಲನ್ನು ಕೋಪದಲ್ಲಿ ಜೋರಾಗಿ ಹಾಕಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಸವರಾಜ್ ಮಹಿಳೆಯನ್ನು ನೂಕಿದ್ದಾನೆ ಎಂಬ ಸಂಗತಿಯು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Bengaluru crime: ಬೆಂಗಳೂರಿನಲ್ಲಿ ಸ್ನೇಹಿತನ ಕೊಲೆಗೈದು ಪೊಲೀಸರಿಗೆ ಶರಣಾದ ಆರೋಪಿ