ಬೆಂಗಳೂರು:ಆನೇಕಲ್ ಕರುನಾಡ ರೈತ ಗೋಪಾಲಕರ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ನಾಗರಬಾವಿ ಸತೀಶ್ ನಾಗರಾಜು ಅವರು ತಮ್ಮ ಹಸುವಿನಿಂದ 49.7 ಲೀಟರ್ ಹಾಲು ಕರೆದು ಪ್ರಥಮ ಸ್ಥಾನ ಗಳಿಸುವ ಜೊತೆಗೆ ಒಂದು ಲಕ್ಷ ನಗದು ಬಹುಮಾನ ಟ್ರೋಫಿ ತಮ್ಮದಾಗಿಸಿಕೊಂಡರು.
ಕೌಶಿಕ್ ಡೈರಿ ಫಾರ್ಮ್‌ನ ಸಿ.ಜಗನ್ನಾಥ್ ಅವರು 45.5 ಲೀಟರ್ ಹಾಲು ಕರೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿ 75 ಸಾವಿರ ರೂ. ನಗದು ಬಹುಮಾನ ಪಡೆದರು. ಉಳಿದಂತೆ ನೆಲಮಂಗಲದ ರಾವತ್ತನಹಳ್ಳಿಯ ಜೀವದಾನ ಡೈರಿ ಫಾರ್ಮ್‌ನ ವೆಂಕಟೇಶ್ 44.14 ಲೀಟರ್ ಹಾಲು ಕರೆದು ತೃತೀಯ ಸ್ಥಾನ ಮತ್ತು 50 ಸಾವಿರ ರೂ. ನಗದು ತಮ್ಮದಾಗಿಸಿಕೊಂಡರು.
ಹಳ್ಳಿಕಾರ್ ರೈತ ವರ್ತೂರು ಸಂತೋಷ್ ಮಾತನಾಡಿ, ದೇಸಿ ತಳಿಗಳಿಗೂ ಪ್ರೋತ್ಸಾಹ ನೀಡಬೇಕು. ಈ ನೆಲದ ಹಸುಗಳ ಹಾಲು ಕರೆಯುವ ಸ್ಫರ್ಧೆ ಆಯೋಜಿಸಬೇಕು. ಯುವ ಸಮುದಾಯ ಹೈನುಗಾರಿಕೆಯ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು ಎಂದರು.
ಶಾಸಕ ಬಿ.ಶಿವಣ್ಣ, ತಮಿಳುನಾಡಿನ ಹೊಸೂರು ಶಾಸಕ ವೈ.ಪ್ರಕಾಶ್, ಬಮೂಲ್ ನಿರ್ದೇಶಕ ಬಿ.ಜಿ.ಆಂಜಿನಪ್ಪ, ಪುರಸಭಾಧ್ಯಕ್ಷ ಎನ್.ಎಸ್.ಪದ್ಮನಾಭ, ಮುಖಂಡರಾದ ಆರ್.ಕೆ.ರಮೇಶ್, ಗೊಟ್ಟಿಗೆರೆ ಮಂಜು, ಕೆ.ಪಿ.ರಾಜು, ಮೇಡಹಳ್ಳಿ ಮುರುಗೇಶ್, ಕರುನಾಡ ರೈತ ಗೋಪಾಲಕರ ಸಂಘದ ಪಾರ್ಥಸಾರಥಿ, ಗೌರವಾಧ್ಯಕ್ಷ ಮುನಿವೆಂಕಟಪ್ಪ, ಅಧ್ಯಕ್ಷ ಎಂ.ರಮೇಶ್ ರೆಡ್ಡಿ, ಉಪಾಧ್ಯಕ್ಷ ಸೀನಪ್ಪ, ಕಾರ್ಯಾಧ್ಯಕ್ಷ ಶ್ರೀನಿವಾಸರೆಡ್ಡಿ ಸ್ಫರ್ಧೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:ವಿಮಾನದಲ್ಲಿ ನಾಯಿಮರಿ ಪ್ರಯಾಣಕ್ಕೆ ಅವಕಾಶ ನೀಡದ ಪೈಲಟ್: ಪ್ರವಾಸವನ್ನೇ ರದ್ದು ಮಾಡಿದ ಕುಟುಂಬ