ಬೆಂಗಳೂರು:ಮುಂಜಾನೆ ಆಗುತ್ತಿದ್ದಂತೆ ದೇವಾಲಯಗಳಿಗೆ ಭಕ್ತರ ದಂಡೇ ಹರಿದು ಬರುತ್ತಿತ್ತು. ದೇವರಿಗೆ ವಿಶೇಷ ಪೂಜೆ ಕೈಂಕರ್ಯಗಳು ಸಲ್ಲಿಸುತ್ತಿದ್ದರು. ಆದ್ರೆ ಮಹಾಮಾರಿ ಕೋವಿಡ್ ಬಂದ ನಂತರ ಬಹುತೇಕರ ಮನಸ್ಥಿತಿ ಬದಲಾಗಿದೆ. ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ ದೇವಾಲಯಗಳಿಗೆ ಪ್ರವೇಶ ನೀಡಿದರೂ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎನ್ನಲಾಗುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ದೇವಸ್ಥಾನಗಳಲ್ಲಿ ನಿತ್ಯ ನೂರಾರು ಮಂದಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು. ಆದರೆ, ಇದೀಗ ಕೆೊರೊನಾ ಈ ಚಿತ್ರಣವನ್ನು ಬದಲಾಯಿಸಿದೆ. ನಗರದ ಇಸ್ಕಾನ್ ದೇವಾಲಯ ಹೊರತುಪಡಿಸಿ ಉಳಿದೆಲ್ಲ ಪ್ರಸಿದ್ಧ ದೇವಸ್ಥಾನಗಳು ಬಾಗಿಲು ತೆರೆದಿದ್ದರೂ ಭಕ್ತರ ಕೋವಿಡ್ ಭಯದಿಂದ ದೇವಸ್ಥಾನಗಳತ್ತ ಮುಖ ಮಾಡ್ತಿಲ್ಲ.
ಜೂನ್ ಎಂಟರಿಂದ ದೇವರ ದರ್ಶನ ಆರಂಭವಾಗಿದೆ. ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನ, ದೊಡ್ಡಗಣಪತಿ ದೇವಸ್ಥಾನ, ಬನಶಂಕರಿ ದೇವಾಲಯಗಳಲ್ಲೂ ನಿತ್ಯ ಪೂಜೆ ನಡೆಯುತ್ತಿದೆ. ಆದ್ರೆ ಭಕ್ತರು ಮಾತ್ರ ಹಿಂದಿನಂತೆ ಇಲ್ಲ. ಕೇವಲ ಹತ್ತು ಇಪ್ಪತ್ತು ಮಂದಿ ಮಾತ್ರ ಬೆಳಗಿನ ಜಾವ ಹಾಗೂ ಸಂಜೆಯೊಳಗೆ ನೂರಕ್ಕಿಂತ ಕಡಿಮೆ ಭಕ್ತರು ಬರುತ್ತಿದ್ದಾರೆ ಕಾಡು ಮಲ್ಲೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಗಂಗಾಧರ ಅವರು.