ಬೆಂಗಳೂರು: ವಿದೇಶಕ್ಕೆ ತೆರಳಿದ್ದ ವೇಳೆ ಕಳ್ಳರು ಕ್ರೆಡಿಟ್ ಕಾರ್ಡ್ ಕದ್ದು ಡ್ರಾ ಮಾಡಿಕೊಂಡಿದ್ದ ಹಣವನ್ನು ಬಲವಂತವಾಗಿ ಪಡೆದಿದ್ದ ಬ್ಯಾಂಕ್ಗೆ ದಂಡ ವಿಧಿಸಿರುವ ಗ್ರಾಹಕ ನ್ಯಾಯಾಲಯ ಅರ್ಜಿದಾರರಿಗೆ 1 ಲಕ್ಷ ಹಣವನ್ನು ವಾಪಸ್ ಕೊಡುವಂತೆ ಆದೇಶಿಸಿದೆ.
ಪ್ಯಾರಿಸ್ಗೆ ತೆರಳಿದ್ದ ವೇಳೆ ಕಳ್ಳತನವಾಗಿದ್ದ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ತಿಳಿಸಿದ್ದರೂ ಬ್ಯಾಂಕ್ ಹಣ ಕಟ್ಟಿಸಿಕೊಂಡಿದೆ ಎಂದು ಆಕ್ಷೇಪಿಸಿ, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ನಿವಾಸಿ ವಿಜಯ್ ಬಸುತ್ಕರ್ ನೀಡಿದ್ದ ದೂರಿನ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಅರ್ಜಿದಾರರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ, ಬ್ಯಾಂಕ್ ವಹಿವಾಟಿನ ದುರ್ಬಳಕೆ ಕುರಿತಂತೆ ಮೂರು ದಿನಗಳಲ್ಲೇ ದೂರು ನೀಡಿದ್ದಾರೆ. ಈ ವಿಚಾರದಲ್ಲಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಂದಲೇ ಕಳ್ಳತನವಾದ ಹಣ ಪಡೆದ ಕ್ರಮ ಸರಿಯಲ್ಲ ಎಂದು ಹೇಳಿದೆ.
ಅಲ್ಲದೇ, ಬ್ಯಾಂಕ್ ಬಲವಂತದಿಂದ ಜಮೆ ಮಾಡಿಸಿಕೊಂಡಿರುವ 1 ಲಕ್ಷ ರೂಪಾಯಿಯನ್ನು ಬಡ್ಡಿ ಸಹಿತ ಹಿಂಪಾವತಿಸಬೇಕು. ಅಲ್ಲದೇ, ನ್ಯಾಯಾಲಯದ ವೆಚ್ಚ ಪರಿಹಾರವಾಗಿ 5 ಸಾವಿರ ಮತ್ತು ತೊಂದರೆ ನೀಡಿದ್ದಕ್ಕಾಗಿ ₹10 ಸಾವಿರ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ನಿವೃತ್ತ ಎಂಜಿನಿಯರ್ ವಿಜಯ್ ಬಸುತ್ಕರ್ 2019 ರ ಡಿಸೆಂಬರ್ 30ರಂದು ಪ್ಯಾರಿಸ್ ಗೆ ತೆರಳಿದ್ದರು. ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ವೇಳೆ 700 ಯುರೋ, ಡ್ರೈವಿಂಗ್ ಲೈಸೆನ್ಸ್ ಹಾಗು 3 ಕ್ರೆಡಿಟ್ ಕಾರ್ಡ್ ಇದ್ದ ಪರ್ಸ್ ಕದ್ದಿದ್ದ ಕಳ್ಳರು ಕ್ರೆಡಿಟ್ ಕಾರ್ಡ್ನಿಂದ 1300 ಯುರೋ(ಸುಮಾರು 1 ಲಕ್ಷ ರೂ)ಗಳನ್ನು ಬಳಕೆ ಮಾಡಿದ್ದರು. ಕೂಡಲೇ ಬಸುತ್ಕರ್ ಇ-ಮೇಲ್ ಮೂಲಕ ಬ್ಯಾಂಕ್ ಗೆ ಘಟನೆ ಬಗ್ಗೆ ಮಾಹಿತಿ ನೀಡಿ, ಕಾರ್ಡ್ ಬ್ಲಾಕ್ ಮಾಡುವಂತೆ ಕೋರಿದ್ದರು. ಪ್ಯಾರಿಸ್ ಪೊಲೀಸರಿಗೂ ದೂರು ನೀಡಿದ್ದರು.
ಜತೆಗೆ, 2020ರ ಜನವರಿ 2ರಂದು ಬೆಂಗಳೂರಿಗೆ ವಾಪಸಾದ ಕೂಡಲೇ ಬ್ಯಾಂಕ್ಗೆ ತೆರಳಿ ಲಿಖಿತ ದೂರು ನೀಡಿದ್ದರು. ಆದರೆ, ಮನವಿ ಪರಿಗಣಿಸದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹಣ ಪಾವತಿಸುವಂತೆ ಒತ್ತಾಯಿಸಿತ್ತು. ಅದರಂತೆ, ವಿಜಯ್ ಬಸುತ್ಕರ್ 2020ರ ಜನವರಿ 29 ರಂದು ಕ್ರೆಡಿಟ್ ಕಾರ್ಡ್ನ ಬಾಕಿ ಮೊತ್ತ 1,00,556 ರೂಪಾಯಿಗಳನ್ನು ಜಮೆ ಮಾಡಿದ್ದರು.
ಬಳಿಕ ಶಾಂತಿನಗರದಲ್ಲಿರುವ ಒಂದನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿದಾರರು ಆರ್.ಬಿ.ಐ ನಿಯಮಾವಳಿಯಂತೆ ಕಾರ್ಡ್ ಕಳೆದುಹೋದ 3 ದಿನಗಳಲ್ಲಿ ಬ್ಯಾಂಕ್ಗೆ ಇ-ಮೇಲ್ ಹಾಗೂ ನೇರವಾಗಿ ದೂರು ನೀಡಿದ್ದಾರೆ. ಈ ವೇಳೆ ಬ್ಯಾಂಕ್ ಎಚ್ಚೆತ್ತುಕೊಳ್ಳದೆ, ಕಳ್ಳರು ಕದ್ದ ಹಣವನ್ನು ಗ್ರಾಹಕನಿಂದ ಪಡೆದಿರುವ ಕ್ರಮ ಸರಿಯಲ್ಲ ಎಂದಿದೆ.
ಓದಿ:ವರ್ಚ್ಯುವಲ್ ಮೂಲಕ ಮೃಗಾಲಯದ ಗೊರಿಲ್ಲಾ ಮನೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ