ಬೆಂಗಳೂರು:ಚಿಕ್ಕಬಳ್ಳಾಪುರ ನಗರದಲ್ಲಿನ ಹೂವಿನ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್ನಿಂದ ಖಾಸಗಿ ಪ್ರದೇಶಕ್ಕೆ ಸ್ಥಳಾಂತರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದೆ.
ಮಾರುಕಟ್ಟೆ ಸ್ಥಳಾಂತರ ಪ್ರಶ್ನಿಸಿ ಚಂಬಳ್ಳಿ ಗ್ರಾಮದ ಕ್ಯಾತಪ್ಪ ಹಾಗೂ ಇತರೆ ಐವರು ರೈತರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಇಂದು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ವಾದ ಮಂಡಿಸಿ, ಚಿಕ್ಕಬಳ್ಳಾಪುರ ಎಪಿಎಂಸಿ ಯಾರ್ಡ್‌ನಲ್ಲಿದ್ದ ಹೂವಿನ ಮಾರುಕಟ್ಟೆಯನ್ನು ಕೋವಿಡ್ ಕಾರಣ ನೀಡಿ ಕೆ.ವಿ ಕ್ಯಾಂಪಸ್ ಬಳಿಯ ಖಾಸಗಿ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದರು. ಈ ತಾತ್ಕಾಲಿಕ ಜಾಗದಲ್ಲಿ ಹೂವುಗಳನ್ನು ಸಂರಕ್ಷಿಸಿಡುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಂತೂ ಹೂವಿನ ಚೀಲಗಳನ್ನು ನೆಲದ ಮೇಲಿಡಲೂ ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.