ಬೆಂಗಳೂರು: ಅಸ್ಸೋಂ ಯುವ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಅಂಕಿತಾ ದತ್ತಾ ಅವರ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರಿಗೆ ನಗರದ ಸೆಷನ್ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರು ಜಾಮೀನು ಅಥವಾ ವ್ಯಾಪ್ತಿ ಹೊಂದಿರುವ ನ್ಯಾಯಾಲಯ ಸಂಪರ್ಕಿಸಲು ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿ ಗುರುವಾರ ಕಾಯ್ದಿರಿಸಿದ್ದ ಆದೇಶವನ್ನು ಬೆಂಗಳೂರಿನ 71 ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ.ಕೆ ಎಸ್ ಜ್ಯೋತಿಶ್ರೀ ಅವರು ಶುಕ್ರವಾರ ಪ್ರಕಟಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಸಂತ್ರಸ್ತೆಯ ಅಡ್ವೊಕೇಟ್ ಆನ್ ರೆಕಾರ್ಡ್ ಆದ ಸ್ವರೂಪ್ ಶ್ರೀನಿವಾಸ್ ಅವರ ಪರವಾಗಿ ಹಿರಿಯ ವಕೀಲ ಕೆ.ಎಸ್ ಫಣೀಂದ್ರ ಅವರು "ಸಂತ್ರಸ್ತೆಯು ಸಿಆರ್ಪಿಸಿ ಸೆಕ್ಷನ್ 164ರ ಅಡಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿರುವ ಹೇಳಿಕೆಯಲ್ಲಿ ಘಟನೆಯ ಕುರಿತು ವಿವರಿಸಿದ್ದಾರೆ. ಆರೋಪಿ ದೂರುದಾರೆಗೆ ಕಿರುಕುಳ ನೀಡಿದ್ದು, ಅವರನ್ನು ಅವಮಾನಿಸಿದ್ದಾರೆ. ಹೀಗಾಗಿ ಸತ್ಯ ಹೊರಗೆಡವಲು ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ. ಆರೋಪಿ ಪ್ರಭಾವಿಯಾಗಿದ್ದು, ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಅಸ್ಸೋಂ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಆರೋಪಿ ಗುವಾಹಟಿ ಹೈಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. ಆದರೆ ಬೇರಾವುದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿಲ್ಲ ಎಂದು ಇಲ್ಲಿ ಹೇಳಿದ್ದಾರೆ. ಹೀಗಾಗಿ ಆರೋಪಿಯ ಅರ್ಜಿ ವಜಾ ಮಾಡಬೇಕು" ಎಂದು ಕೋರಿದ್ದರು.
ಶ್ರೀನಿವಾಸ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ಅವರು "ರಾಜಕೀಯ ವಿರೋಧಿಗಳ ಜತೆ ಕೈ ಜೋಡಿಸಿ ಸಂತ್ರಸ್ತೆ ಆರೋಪ ಮಾಡುತ್ತಿದ್ದಾರೆ. ಪಕ್ಷದಲ್ಲಿ ಅವರಿಗೆ ಸ್ಥಾನಮಾನ ಕೊಡಿಸಲಾಗಿದೆ. ಆದಾಗ್ಯೂ ದುರುದ್ದೇಶದಿಂದ ಆರೋಪ ಮಾಡಿದ್ದಾರೆ. ಹಲವು ದಿನಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಅಸ್ಸೋಂ ಪೊಲೀಸರು ಬಂಧಿಸಲು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಶ್ರೀನಿವಾಸ್ ಅವರು ತನಿಖೆಗೆ ಹಾಜರಾಗುತ್ತಾರೆ" ಎಂದು ವಾದಿಸಿದರು.