ಬೆಂಗಳೂರು : ಪ್ರತಿಷ್ಠಿತ ಇನ್ಶೂರೆನ್ಸ್ ಕಂಪನಿಗಳ ಹೆಸರಿನಲ್ಲಿ ಅವಧಿ ಪೂರ್ವ ಪಾಲಿಸಿಗಳನ್ನು ಹಿರಿಯ ನಾಗರಿಕರಿಗೆ ನೀಡುವುದಾಗಿ ವಂಚಿಸುತ್ತಿದ್ದ ದಂಪತಿಯನ್ನ ಸಿಸಿಬಿಯ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉದಯ್.ಬಿ ಹಾಗೂ ತೀರ್ಥಾ ಗೌಡ ಬಂಧಿತ ದಂಪತಿ.
ಈ ಹಿಂದೆ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳಿಬ್ಬರಿಗೂ ಅದರ ಜ್ಞಾನವಿತ್ತು. ಕೋವಿಡ್ ನಂತರ ಬರುತ್ತಿದ್ದ ಆದಾಯ ಇಬ್ಬರಿಗೂ ಸಾಕಾಗುತ್ತಿರಲಿಲ್ಲ. ಇದರಿಂದ ಅಡ್ಡದಾರಿ ಹಿಡಿದಿದ್ದ ದಂಪತಿಗಳು, ಇಂದಿರಾನಗರದಲ್ಲಿ ಶ್ರೀನಿಧಿ ಇನ್ಫೋಸೋರ್ಸ್ ಎಂಬ ಕಚೇರಿಯನ್ನು ಆರಂಭಿಸಿದ್ದರು. ಆ ಕಚೇರಿಯಲ್ಲಿ 4 ರಿಂದ 5 ಜನರು ಟೆಲಿ ಕಾಲರ್ ಗಳನ್ನು ನೇಮಕ ಮಾಡಿಕೊಂಡು ಅವರ ಮೂಲಕ ಇನ್ಶುರೆನ್ಸ್ ಲ್ಯಾಪ್ಸ್ ಆಗಿರುವ ಪಾಲಿಸಿದಾರರುಗಳಿಗೆ ಪಾಲಿಸಿ ಹಣ ಕಟ್ಟಿದಲ್ಲಿ ಇನ್ಶೂರೆನ್ಸ್ ಹಣವು ದೊರೆಯುವುದು ಅಥವಾ ಈಗಾಗಲೇ ಕಂತನ್ನು ಕಟ್ಟಿ ಬಿಟ್ಟಿರುವ ಹಣಕ್ಕೆ ಬಡ್ಡಿ ಸಮೇತ ಹಣವನ್ನು ವಾಪಸ್ ನೀಡಲಾಗುವುದು ಎಂದು ಹೇಳಿಸುವ ಕೆಲಸವನ್ನು ಮಾಡಿಸುತ್ತಿದ್ದರು.
ಅಲ್ಲದೆ ಹಿರಿಯ ನಾಗರಿಕರಿಗೆ ಒಂದು ವರ್ಷಕ್ಕೆ 1 ಕೋಟಿಯ ಪಾಲಿಸಿ ಮಾಡಿಸಿದ್ದಲ್ಲಿ 5 ಕೋಟಿ ಹಣವು ಬರುತ್ತದೆ ಎಂದು ನಂಬಿಸಿ, ಅವರ ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿಯೂ ಹೆಚ್ಚಿನ ಪಾಲಿಸಿಗಳನ್ನು ಮಾಡಿಸುವಂತೆ ಅಮೀಷವೊಡ್ಡಿ ಹಣ ಪಡೆದುಕೊಂಡು ತಮ್ಮ ಸ್ವಂತ ಅಕೌಂಟ್ ಹಾಗೂ ತಮ್ಮ ಹೆಸರಿನಲ್ಲಿ ಪಾಲಿಸಿಗಳನ್ನು ಮಾಡಿಸಿಕೊಳ್ಳುತ್ತಿದ್ದರು.