ಬೆಂಗಳೂರು : ನಗರದ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ನೂರಾರು ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್, ಈ ಕುರಿತಂತೆ ದಾಖಲೆ ಬಿಡುಗಡೆ ಮಾಡಿದ್ದಾರೆ.
ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪಕ್ಷದ ಮುಖಂಡರ ಜೊತೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ತಮ್ಮ ಆಪ್ತರನ್ನು ಮುಂದಿಟ್ಟುಕೊಂಡು ಮಾಜಿ ಕಾರ್ಪೊರೇಟರ್ ಎನ್.ಆರ್. ರಮೇಶ್ ನಡೆಸಿದ್ದಾರೆ. ಇದರ ಹಿಂದೆ ಪದ್ಮನಾಭನಗರ ಶಾಸಕ ಹಾಗೂ ಸಚಿವ ಆರ್.ಅಶೋಕ್ ಅವರ ಕೈವಾಡವಿದೆ. ಅವರ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಮಟ್ಟದ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಪಿ.ಆರ್. ರಮೇಶ್ ದಾಖಲೆಗಳನ್ನು ಬಿಡುಗಡೆ ಮಾಡಿದರು ನಾವು ಈಗಾಗಲೇ ಈ ಹಗರಣದ ಸೂಕ್ತ ತನಿಖೆ ನಡೆಸುವಂತೆ ಎಸಿಬಿ, ಲೋಕಾಯುಕ್ತ ಸೇರಿದಂತೆ ಹಲವು ತನಿಖಾ ಸಂಸ್ಥೆಗಳಿಗೆ ಮನವಿ ಮಾಡಿದ್ದೇವೆ ಎಂದರು. ಬಿಬಿಎಂಪಿ ವಾರ್ಷಿಕ 10 ಸಾವಿರ ಕೋಟಿಯ ಅಯವ್ಯಯ ಮಂಡಿಸುತ್ತದೆ. ಆದರೆ, ಈ ಹಣವನ್ನು ಯಾರು ಏನ್ಮಾಡ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಗುವುದಿಲ್ಲ. ಪದ್ಮನಾಭನಗರ ಕ್ಷೇತ್ರದಲ್ಲಿ ಅವ್ಯವಹಾರ ಹೆಚ್ಚಿದೆ, ಬಿಬಿಎಂಪಿ ಅನುದಾನವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಎನ್.ಆರ್. ರಮೇಶ್ ಅವರ ವಾರ್ಡ್ನಲ್ಲಿ ಭ್ರಷ್ಟಾಚಾರ ನಡೆದಿದೆ. ಅವರು ಬರೀ ಸುಳ್ಳು ಹೇಳಿ ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಆರೋಪಿಸಿದರು.
636 ಕೋಟಿ ಅಕ್ರಮ :
ಪದ್ಮನಾಭನಗರ ಕ್ಷೇತ್ರದಲ್ಲಿ 7 ವಾರ್ಡ್ಗಳು ಬರುತ್ತವೆ. ಈ ಕ್ಷೇತ್ರಗಳಿಗೆ 636 ಕೋಟಿ ರೂ. ಅನುದಾನ ನೀಡಲಾಗಿದೆ. ನಾಲ್ಕೈದು ವರ್ಷಗಳಲ್ಲಿ ಇಷ್ಟು ಅನುದಾನ ನೀಡಲಾಗಿದೆ. ಆದರೆ, ಇಲ್ಲಿ ಗುತ್ತಿಗೆಯನ್ನು ಬೇನಾಮಿ ಗುತ್ತಿಗೆದಾರನಿಗೆ ನೀಡಲಾಗ್ತಿದೆ. ಆರ್.ಸತೀಶ್ ಎಂಬವರಿಗೆ ಅಕ್ರಮವಾಗಿ ಗುತ್ತಿಗೆ ನೀಡಲಾಗಿದೆ. ಕಾನೂನು ಬಾಹಿರವಾಗಿ ಅವರು ಟೆಂಡರ್ ಪಡೆದುಕೊಂಡಿದ್ದಾರೆ. ಗುತ್ತಿಗೆದಾರರಾದ ಸತೀಶ್, ಮಂಜುನಾಥ್ ಎಲ್ಲರೂ ಎನ್.ಆರ್. ರಮೇಶ್ ಆಪ್ತರು. ಇವರೆಲ್ಲ ಸೇರಿಕೊಂಡು ಕೋಟಿಗಟ್ಟಲೆ ಹಣ ತಿಂದು ತೇಗಿದ್ದಾರೆ. ಅಧಿಕಾರಿಗಳಿಗೆ ಭಯ ಹುಟ್ಟಿಸಿ ಹಣ ಪಡೆಯುತ್ತಿದ್ದಾರೆ ಎಂದು ರಮೇಶ್ ಗಂಭೀರ ಆರೋಪ ಮಾಡಿದರು.
ಟೆಂಡರ್ ಅಕ್ರಮ :ಯಡಿಯೂರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 5.50 ಕೋಟಿ ರೂ.ಗೆ ಟೆಂಡರ್ ನೀಡಲಾಗಿದೆ. ಎನ್.ಆರ್ ರಮೇಶ್ ಬೇನಾಮಿಗೆ ಗುತ್ತಿಗೆ ನೀಡಿದ್ದಾರೆ. ಒಂದೇ ಕಾಮಗಾರಿಗೆ ಮೂರು ಪ್ರತ್ಯೇಕ ಟೆಂಡರ್ ನೀಡಿದ್ದಾರೆ, ಸತೀಶ್ ಎಂಬವರು ಟೆಂಡರ್ ಪಡೆದಿದ್ದಾರೆ. ಒಂದು ಕಾಮಗಾರಿಗೆ ಹಲವು ಆಡಿಟ್ ಆಗಬೇಕು. ವರ್ಕ್ ಆಡಿಟ್, ಕ್ವಾಲಿಟಿ ಆಡಿಟ್, ಸೈಡ್ ಆಡಿಟ್, ಫೈನಾನ್ಸ್ ಆಡಿಟ್ ನಡೆಯಬೇಕು. ಆದರೆ, ಇಲ್ಲಿ ಕಾನೂನು ಗಾಳಿಗೆ ತೂರಿ ಟೆಂಡರ್ ಪಡೆದಿದ್ದಾರೆ ಎಂದು ಪಿ.ಆರ್. ರಮೇಶ್ ಹೇಳಿದರು.
ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ. ಎನ್. ಆರ್ ರಮೇಶ್ ಬೇನಾಮಿ ಹೆಸರಿನಲ್ಲಿ 100 ಕಾಮಗಾರಿಗಳನ್ನು ಮಾಡಿಸಿದ್ದರೆ, ಅವರ ಆಪ್ತ ಸತೀಶ್ 64 ಕಾಮಗಾರಿಗಳನ್ನು ಪಡೆದುಕೊಂಡಿದ್ದಾರೆ. ಈ ರೀತಿ ಒಬ್ಬರೇ ಎಲ್ಲಾ ಕೆಲಸ ಪಡೆಯಲು ಹೇಗೆ ಸಾಧ್ಯ? ಅಧಿಕಾರಿಗಳನ್ನು ಹೆದರಿಸಿ ಇವರು ಟೆಂಡರ್ ಪಡೆದಿದ್ದಾರೆ. ಇವರು ಆರ್ಟಿಐ ಕಾರ್ಯಕರ್ತರನ್ನು ಹೆದರಿಸುತ್ತಾರೆ ಎಂದರು.
ಓದಿ : Airport ರೇವಣ್ಣನವರದ್ದಲ್ಲ, ಅದು ಹಾಸನದ ಆಸ್ತಿ: ಶಾಸಕ ಪ್ರೀತಂ ಗೌಡ