ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಭೀತಿ ನಗರದ ಜನರಲ್ಲಿ ಹೆಚ್ಚಾಗಿದ್ದು, ರಾಜ್ಯದಲ್ಲಿ ವೈರಸ್ ಹರಡದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಕೊರೋನಾ ವೈರಸ್ ಭೀತಿ: ಪರೀಕ್ಷೆಗೆಂದು ಆಸ್ಪತ್ರೆಗಳಿಗೆ ಆಗಮಿಸುತ್ತಿರುವ ಜನತೆ
ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ನಿಂದ ಭಯಭೀತರಾಗಿರುವ ಜನರು ಆಸ್ಪತ್ರೆಗೆಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವೊಂದು ಆಸ್ಪತ್ರೆಗಳಲ್ಲಿ ಇದಕ್ಕಾಗಿ ವಿಶೇಷ ವಾರ್ಡ್ಗಳನ್ನು ತೆರೆಯಲಾಗಿದೆ.
ಕೊರೋನಾ ವೈರಸ್ ಭೀತಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಸುಖಾ ಸುಮ್ಮನೆ ಕೊರೋನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಿದ್ದಾರೆ. ನಗರದ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಇದಕ್ಕಾಗಿ ಪ್ರತ್ಯೇಕ ವಾರ್ಡ್ ಕೂಡ ತೆರೆಯಲಾಗಿದೆ.
ಚೀನಾ ದೇಶದಿಂದ ಬರುವ ಪ್ರತಿಯೊಬ್ಬರಿಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಲಾಗುತ್ತಿದ್ದು, ಈ ವ್ಯಕ್ತಿಗಳನ್ನು ಮಾತ್ರ ಲ್ಯಾಬ್ ವರದಿ ಬರುವವರೆಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಪರೀಕ್ಷೆಗೆಂದು ಬರುವವರನ್ನ ಆಸ್ಪತ್ರೆಯಲ್ಲಿ ಇರಿಸಿಕೊಳ್ಳದೆ ಡಿಸ್ಟಾರ್ಜ್ ಮಾಡಿಸಲಾಗುತ್ತಿದೆ ಎಂದು ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶಕರು ತಿಳಿಸಿದರು.