ಕರ್ನಾಟಕ

karnataka

ETV Bharat / state

ಕೊರೊನಾ ಚಿಕಿತ್ಸೆ ವಿಳಂಬ ಆರೋಪ.. ಸಂಪೂರ್ಣ ವಿವರ ಸಲ್ಲಿಸಲು ಹೈಕೋರ್ಟ್ ತಾಕೀತು - ಸಂಪೂರ್ಣ ವಿವರ ಸಲ್ಲಿಸಲು ತಾಕೀತು

ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿರಬೇಕು.‌‌ ಆನ್​ಲೈನ್ ನಲ್ಲಿ ಖಾಲಿ ಬೆಡ್​ಗಳ ಮಾಹಿತಿ ಲಭ್ಯವಿದೆಯೇ? ಸೋಂಕು ತೀವ್ರವಾಗಿ ಐಸಿಯುಗೆ ದಾಖಲಾಗಬೇಕೆಂದರೆ ಯಾವ ವ್ಯವಸ್ಥೆ ಮಾಡಿದ್ದೀರಿ? ಹಾಸಿಗೆ ಮತ್ತು ಐಸಿಯು ಸಿಗದಿದ್ದರೆ ದೂರು ನೀಡುವುದು ಹೇಗೆ? ಯಾರಿಗೆ ದೂರು ನೀಡಬೇಕು?..

ಹೈಕೋರ್ಟ್ ತಾಕೀತು
ಹೈಕೋರ್ಟ್ ತಾಕೀತು

By

Published : Jul 13, 2020, 10:34 PM IST

ಬೆಂಗಳೂರು : ಕೊರೊನಾ ಸೋಂಕಿತ ವ್ಯಕ್ತಿ ಪರೀಕ್ಷೆ ಮಾಡಿಸಿಕೊಳ್ಳಲು ಲ್ಯಾಬ್​ಗೆ ತೆರಳುವಲ್ಲಿಂದ ಹಿಡಿದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವವರೆಗೂ‌ ಇರುವ ವ್ಯವಸ್ಥೆಗಳ ಕುರಿತು ಮಂಗಳವಾರ ಮಧ್ಯಾಹ್ನದೊಳಗೆ ನಿಖರ ವಿವರ ಸಲ್ಲಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ತಾಕೀತು‌‌ ಮಾಡಿದೆ.

ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದಿರುವುದರ ಪರಿಣಾಮವಾಗಿ ಸಾವು ನೋವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಓಕ ಅವರು ಸರ್ಕಾರಿ ವಕೀಲರನ್ನು ಉದ್ದೇಶಿಸಿ, ಒಬ್ಬ ವ್ಯಕ್ತಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದರೆ ಆತ ಡೆಸಿಗ್ನೇಟೆಡ್ ಲ್ಯಾಬ್​ಗೆ ಹೋಗುವುದು ಹೇಗೆ? ತಪಾಸಣೆ ನಡೆಸುವಾಗ ಯಾವ ವಿಷಯಗಳಿಗೆ ಆದ್ಯತೆ ನೀಡಬೇಕು ಎಂಬ ಬಗ್ಗೆ ಮಾರ್ಗಸೂಚಿ ಇದೆಯೇ? ಪರೀಕ್ಷಾ ವರದಿ ನೀಡಲು ಕಾಲಮಿತಿ ನಿಗದಿಯಾಗಿದೆಯೇ? ವ್ಯಕ್ತಿಗೆ ಕೊರೊನಾ ದೃಢಪಟ್ಟ ತಕ್ಷಣ ರೋಗಿ ಯಾವೆಲ್ಲಾ ವೈದ್ಯಕೀಯ ಸೌಲಭ್ಯ‌ ಪಡೆಯಬಹುದು?

ಅವುಗಳನ್ನು ಪಡೆಯಲು ಯಾವ ವ್ಯವಸ್ಥೆ ರೂಪಿಸಲಾಗಿದೆ? ಪಾಸಿಟಿವ್ ಬಂದಾಗ ಆಸ್ಪತ್ರೆಗೆ ದಾಖಲಾಗುವ ಪ್ರಕ್ರಿಯೆ ಯಾವ ರೀತಿ ಇದೆ? ಯಾರನ್ನು ಮೊದಲು ಸಂಪರ್ಕಿಸಬೇಕು? ಎಂದು ಹಲವು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಸರ್ಕಾರದ ಪರ ವಕೀಲರಿಂದ ಸಮರ್ಪಕ ಉತ್ತರ ಸಿಗದ ಹಿನ್ನೆಲೆ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ನಾಳೆ ಮಧ್ಯಾಹ್ನ ನಡೆಯುವ ವಿಚಾರಣೆ ಸಂದರ್ಭದಲ್ಲಿ ಕೊರೊನಾ ಚಿಕಿತ್ಸೆಗೆ ಲಭ್ಯವಿರುವ ಸಾಧ್ಯತೆಗಳು ಮತ್ತು ಸಮಸ್ಯೆಗಳೆಲ್ಲದರ ಕುರಿತು ಅತ್ಯಂತ ನಿಖರವಾದ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಪ್ರಕರಣವೊಂದನ್ನು ಪ್ರಸ್ತಾಪಿಸಿದ ಸಿಜೆ, ಕಳೆದ ವಾರ ಹೈಕೋರ್ಟ್ ಸಿಬ್ಬಂದಿಯೊಬ್ಬರ ಕುಟುಂಬ ಸದಸ್ಯರಿಗೆ ಕೊರೊನಾ ದೃಢಪಟ್ಟಿತು‌. ಇವರಿಗೆ ನೆರವು ನೀಡಲು ಹೈಕೋರ್ಟ್ ರಿಜಿಸ್ಟ್ರಾರ್ ಅಡ್ಮಿನ್ ಮೂರು ಗಂಟೆ ಕಾಲ ಸತತವಾಗಿ ಪ್ರಯತ್ನಿಸಿದರೂ ನಗರದ ಯಾವೊಂದು ಆಸ್ಪತ್ರೆಯಲ್ಲಿ ಐಸಿಯು ಸಿಗಲಿಲ್ಲ. ಇವರಿಗೆ ಹೀಗಾಗುವಾಗ ಜನ ಸಾಮಾನ್ಯರ ಪರಿಸ್ಥಿತಿ ಏನು? ನಗರ ವ್ಯಾಪ್ತಿಯಲ್ಲಿ ಯಾರಿಗಾದರೂ ಪಾಸಿಟಿವ್ ಬಂದಲ್ಲಿ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿ ಸೋಂಕಿತರನ್ನು ಸಂಪರ್ಕಿಸಲು ಎಷ್ಟು ಸಮಯ ಬೇಕು? ಎಂದು‌ ಖಾರವಾಗಿ‌ ಪ್ರಶ್ನಿಸಿದರು.

ಅಲ್ಲದೇ, ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿರಬೇಕು.‌‌ ಆನ್​ಲೈನ್ ನಲ್ಲಿ ಖಾಲಿ ಬೆಡ್​ಗಳ ಮಾಹಿತಿ ಲಭ್ಯವಿದೆಯೇ? ಸೋಂಕು ತೀವ್ರವಾಗಿ ಐಸಿಯುಗೆ ದಾಖಲಾಗಬೇಕೆಂದರೆ ಯಾವ ವ್ಯವಸ್ಥೆ ಮಾಡಿದ್ದೀರಿ? ಹಾಸಿಗೆ ಮತ್ತು ಐಸಿಯು ಸಿಗದಿದ್ದರೆ ದೂರು ನೀಡುವುದು ಹೇಗೆ? ಯಾರಿಗೆ ದೂರು ನೀಡಬೇಕು? ಈ ದೂರಿಗೆ ಸ್ಪಂದಿಸುವ ವ್ಯವಸ್ಥೆ ಹೇಗೆ? ದೂರು ಬಂದ‌ ಕೂಡಲೇ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ? ತುರ್ತು ಆ್ಯಂಬುಲೆನ್ಸ್ ಸೇವೆಗೆ ಕೈಗೊಂಡಿರುವ ಕ್ರಮವೇನು? ಎಂದು ಪ್ರಶ್ನಿಸಿದ ಪೀಠ, ನಗರದಲ್ಲಿ ‌ಪರಿಸ್ಥಿತಿ ಬಿಗಡಾಯಿಸುತ್ತಿದೆ‌‌. ಹೀಗಾಗಿ, ಈ‌ ಎಲ್ಲ ವಿಷಯಗಳ ಬಗ್ಗೆ ಮಂಗಳವಾರ ಮಧ್ಯಾಹ್ನ 2.30ಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಸೂಚಿಸಿತು.

ABOUT THE AUTHOR

...view details