ಬೆಂಗಳೂರು:ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಕೋವಿಡ್- 19 ಪರಿಹಾರ ಕಾರ್ಯಗಳನ್ನು ಬೆಂಬಲಿಸಿ 30 ಐಸಿಯು ವೆಂಟಿಲೇಟರ್‌ಗಳನ್ನು ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್‌ಗೆ (ಕೆಎಸ್‌ಎಂಎಸ್‌ಸಿಎಲ್)ಒದಗಿಸಿದೆ. ಇದಲ್ಲದೆ, ಕೋವಿಡ್ ವಿರುದ್ಧದ ಹೋರಾಟವನ್ನು ಬಲಪಡಿಸಲು ಫ್ಲಿಪ್‌ಕಾರ್ಟ್ 250 ಐಸಿಯು ಮಲ್ಟಿಪಾರಾ ಮಾನಿಟರ್‌ಗಳನ್ನು ರಾಜ್ಯಕ್ಕೆ ನೀಡುತ್ತಿದೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಫ್ಲಿಪ್ ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ನೇತೃತ್ವದ ನಿಯೋಗ ಭೇಟಿ ನೀಡಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಡಾ.ಎನ್.ಎನ್. ಅಶ್ವತ್ ನಾರಾಯಣ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ಫ್ಲಿಪ್ ಕಾರ್ಟ್ ಮತ್ತು ವಾಲ್ ಮಾರ್ಟ್ ಸಂಸ್ಥೆಯ ವತಿಯಿಂದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಕೋವಿಡ್ ನಿರ್ವಹಣೆಗೆ ಜೀವ ರಕ್ಷಕ ವೈದ್ಯಕೀಯ ಉಪಕರಣಗಳನ್ನು ಸಿಎಂ ಅವರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕೊರೊನಾ ಎರಡನೇ ಅಲೆ ವಿರುದ್ಧ ರಾಜ್ಯ ಸರ್ಕಾರವು ಎಲ್ಲಾ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ವ್ಯವಸ್ಥಿತವಾಗಿ ಕೈಗೊಂಡಿದೆ. ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಸಂಘ-ಸಂಸ್ಥಗಳು ಕೈಜೋಡಿಸುತ್ತಿರುವುದು ಶ್ಲಾಘನೀಯವಾಗಿದ್ದು, ಫ್ಲಿಪ್ ಕಾರ್ಟ್ ನೀಡಿದ 30 ಐಸಿಯು ವೆಂಟಿಲೇಟರ್‌ಗಳು ಮತ್ತು 250 ಐಸಿಯು ಮಲ್ಟಿಪಾರಾ ಮಾನಿಟರ್‌ಗಳ ಕೊಡುಗೆ ಪ್ರಶಂಸನೀಯವಾಗಿದೆ ಎಂದರು.