ಹಾಸನ: ಮಂಗಳೂರು ಮತ್ತು ಬೆಂಗಳೂರು ಸಂಪರ್ಕಕ್ಕೆ ಪ್ರಮುಖ ಮಾರ್ಗವಾಗಿರುವ ಶಿರಾಡಿ ಘಾಟ್ನಲ್ಲಿ ಸುರಂಗ ಮಾರ್ಗಗಳನ್ನು ಮಾಡುವ ಬಗ್ಗೆ ಈ ಹಿಂದೆಯೇ ಪ್ರಸ್ತಾಪಗಳಿದ್ದವು. ಈಗ ಮತ್ತೆ ಮುನ್ನಲೆ ಬಂದಿದೆ. ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ದೋಣಿಗಾಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 75 ಕಾಮಗಾರಿ ಪರಿಶೀಲನೆಗೆ ಬಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಯಾಣಿಕರ ಅನುಕೂಲಕರ ಸಂಚಾರ ವ್ಯವಸ್ಥೆಗಾಗಿ ಸುರಂಗವನ್ನು ಒಳಗೊಂಡ ಮಾರ್ಗ ನಿರ್ಮಾಣ ಆದಷ್ಟು ಬೇಗ ಮಾಡಲಾಗುವುದು ಎಂದು ಭರವಸೆ ಇತ್ತಿದ್ದಾರೆ.
ಕಾಮಗಾರಿ ವೀಕ್ಷಣೆ ವೇಳೆ ಮಾಧ್ಯಮದಬರೊಂದಿಗೆ ಮಾತನಾಡಿದ ಅವರು,"ಒಟ್ಟು 30 ಕಿಲೋಮೀಟರ್ ಉದ್ದದ ಹೊಸ ಯೋಜನೆಗೆ ರೂಪುರೇಷೆ ಸಿದ್ದಪಡಿಸಲಾಗಿದೆ. ಇದರಲ್ಲಿ 3.8 ಕಿಲೋಮೀಟರ್ ಸುರಂಗ ಮಾರ್ಗ ಇರಲಿದೆ. ಹತ್ತು ಕಿಲೋಮೀಟರ್ ಪ್ರದೇಶ ಅರಣ್ಯ ಸಂರಕ್ಷಣಾ ಕಾಯ್ದೆ ವ್ಯಾಪ್ತಿಯಲ್ಲಿ ಇರುವುದರಿಂದ ಅರಣ್ಯ ಇಲಾಖೆಯೊಂದಿಗೆ ವ್ಯವಹರಿಸಿ ಆನೆ ಕಾರಿಡಾರ್ ಸೇರಿದಂತೆ ಪ್ರಾಣಿಗಳ ಚಲನ ವಲನಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುವುದು" ಎಂದರು.
ಏಕಮುಖ ಸಂಚಾರ ಸುರಂಗ:ಇನ್ನೂ ವಿಸ್ತೃತ ಕ್ರೀಯಾ ಯೋಜನೆ ತಯಾರಾಗಬೇಕಿದೆ. ಹಾಲಿ ಕೆಲವಡೆ ಪ್ರತ್ಯೇಕ ಏಕಮುಖ ಸಂಚಾರ ಮಾರ್ಗ ರೂಪಿಸುವ ಪ್ರಸ್ತಾಪವನೆ ಕೂಡ ಇದೆ. ಪ್ರಸ್ತಾಪಿತ ಯೋಜನೆಯನ್ನು ಮಾಡಿದರೆ ಒಂದು ಕಡೆಯಿಂದ ಹೋಗಲು ಒಂದು ಕಡೆಯಿಂದ ಬರಲು ಅನುಕೂಲ ಆಗಲಿದೆ. ಇದು ಅತ್ಯಂತ ತಿರುವುಗಳಿರುವ ಪ್ರದೇಶ, ಬಹಳಷ್ಟು ಅಪಘಾತಗಳಾಗುತ್ತವೆ. ಹೊಸ ಯೋಜನೆಯಿಂದ ಸಮಸ್ಯೆ ಪರಿಹಾರ ಆಗುತ್ತದೆ ಅನ್ನೋದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಲಹೆಯಾಗಿದೆ ಎಂದು ಸಚಿವ ಹೇಳಿದರು.