ಬೆಂಗಳೂರು: ರಾಜ್ಯ ಸರ್ಕಾರ ವರ್ಷದ ಹಿಂದೆ ಫ್ಲೆಕ್ಸ್, ಬ್ಯಾನರ್ಗಳ ಮೇಲೆ ವಿಧಿಸಿದ್ದ ನಿಷೇಧ ಹಿಂಪಡೆದಿದೆಯೇ? ಎನ್ನುವ ಅನುಮಾನ ಮೂಡಿಸುತ್ತಿದೆ ಪ್ರತಿಪಕ್ಷ ಕಾಂಗ್ರೆಸ್ ನಡೆ.
ಕೈ ಸಮಾವೇಶದಲ್ಲಿ ರಾರಾಜಿಸಿದ ಫ್ಲೆಕ್ಸ್, ಬ್ಯಾನರ್ಸ್: ಕೋರ್ಟ್ ಆದೇಶಕ್ಕೆ ಬೆಲೆ ಕೊಡದ ಪ್ರತಿಪಕ್ಷ
ಬೆಂಗಳೂರು ವಿಭಾಗ ಮಟ್ಟದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ 'ಸಂಕಲ್ಪ ಸಮಾವೇಶ'ದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ಹಾಕಲಾಗಿದೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ 'ಸಂಕಲ್ಪ ಸಮಾವೇಶ'ದಲ್ಲಿ ಇಂಥದ್ದೊಂದು ಸನ್ನಿವೇಶ ಗೋಚರಿಸಿತು. ರಾಜ್ಯ ಸರ್ಕಾರದ ನಿಷೇಧಕ್ಕಿಲ್ಲಿ ಕಿಂಚಿತ್ ಬೆಲೆ ಕಾಣಲಿಲ್ಲ. ಫ್ಲೆಕ್ಸ್, ಬ್ಯಾನರ್ ಜತೆ ಪಕ್ಷದ ಬಾವುಟ ಒಳಗೊಂಡ ಪ್ಲಾಸ್ಟಿಕ್ ತೋರಣಗಳು ರಾರಾಜಿಸಿದವು. ಮೈಸೂರು ರಸ್ತೆ ಆರ್.ವಿ. ಕಾಲೇಜು ಸಮೀಪದ ಪೂರ್ಣಿಮಾ ಪ್ಯಾಲೇಸ್ ಆವರಣದಲ್ಲಿ ಸಮಾವೇಶ ನಡೆಯಿತು. ನಗರದ ನಾಯಂಡಹಳ್ಳಿಯಿಂದಲೇ ಪಕ್ಷದ ನಾಯಕರು ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟಿದ್ದರು.
ಪಕ್ಷದ ಬಾವುಟ ಒಳಗೊಂಡ ಪ್ಲಾಸ್ಟಿಕ್ ತೋರಣಗಳು ಅಲ್ಲಲ್ಲಿ ಕಾಣಸಿಕ್ಕವು. ಪ್ಯಾಲೆಸ್ ಪ್ರವೇಶದ್ವಾರದಲ್ಲಿ ಅಪಾರ ಸಂಖ್ಯೆಯ ಕಟೌಟ್ ಗಳು, ಬ್ಯಾನರ್, ಬಂಟಿಂಗ್, ಪ್ಲಾಸ್ಟಿಕ್ ತೋರಣಗಳು ಕಣ್ಣು ಕುಕ್ಕುವಂತೆ ರಾರಾಜಿಸುತ್ತಿದ್ದವು. ಬೆಂಗಳೂರು ನಗರದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಪ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ರಾಜ್ಯಾದ್ಯಂತ ವಿಸ್ತರಿಸಿ ಕಳೆದ ನವೆಂಬರ್ನಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಬೆಂಗಳೂರಿನಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ ಎಂದು ಹೈಕೋರ್ಟ್ ಚಾಟಿ ಬೀಸುತ್ತಲೇ ಇದೆ.