ಕರ್ನಾಟಕ

karnataka

ETV Bharat / state

ವಿಧಾನಮಂಡಲ ಅಧಿವೇಶನ: ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ಕಾರ್ಯತಂತ್ರ - ವಿಧಾನಮಂಡಲ ಅಧಿವೇಶನ 2021

ಸೆಪ್ಟೆಂಬರ್‌ 13ರಿಂದ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದೆ. 10 ದಿನಗಳ ಅವಧಿಯ ಕಲಾಪದಲ್ಲಿ ಹೆಚ್ಚಿನ ಸಮಯವನ್ನು ಸದನದಲ್ಲಿ ಸರ್ಕಾರದ ಲೋಪಗಳನ್ನೇ ಎತ್ತಿ ಹಿಡಿಯಲು ಕಾಂಗ್ರೆಸ್ ತೀರ್ಮಾನಿಸಿದೆ.

congress
ಕಾಂಗ್ರೆಸ್

By

Published : Sep 9, 2021, 3:09 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಕಟ್ಟಿಹಾಕಲು ಅಗತ್ಯವಿರುವ ವಿಚಾರಗಳ ಸಂಗ್ರಹ ಹಾಗೂ ವಿನೂತನ ತಂತ್ರಗಾರಿಕೆ ರೂಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸೆ.13ರಿಂದ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದೆ. 10 ದಿನಗಳ ಅವಧಿಯ ಕಲಾಪದಲ್ಲಿ ಹೆಚ್ಚಿನ ಸಮಯವನ್ನು ಸದನದಲ್ಲಿ ಸರ್ಕಾರದ ಲೋಪಗಳನ್ನೇ ಎತ್ತಿ ಹಿಡಿಯಲು ಕಾಂಗ್ರೆಸ್ ನಿರ್ಧರಿಸಿದೆ.

ಪ್ರತಿದಿನ ಒಂದು ವಿಚಾರವನ್ನು ಮುಂದಿಟ್ಟು ಚರ್ಚೆಗೆ ಅವಕಾಶ ನೀಡುವಂತೆ ನಿಲುವಳಿ ಸೂಚನೆ ಮಂಡನೆ, ವಿವಿಧ ನಿಯಮಗಳ ಅಡಿ ಚರ್ಚೆಗೆ ಅವಕಾಶ ಕೋರುವ ಮೂಲಕ ಸರ್ಕಾರವನ್ನು ಸಂಪೂರ್ಣ ಕಟ್ಟಿ ಹಾಕಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಇದರ ಹಿನ್ನೆಲೆಯಲ್ಲಿ ಇಂದು ಇಲ್ಲವೇ ನಾಳೆ ರಾಜ್ಯ ಕಾಂಗ್ರೆಸ್ ನಾಯಕರೆಲ್ಲಾ ಒಂದೆಡೆ ಸೇರಿ ಚರ್ಚಿಸಲಿದ್ದಾರೆ. ಎರಡು ದಿನದ ಹಿಂದೆ ನಡೆದ ಶಾಸಕಾಂಗ ಸಭೆಯಲ್ಲಿ ಸಹ ಹಲವು ವಿಚಾರಗಳ ಚರ್ಚೆ ನಡೆದಿದೆ. ಹಿರಿ-ಕಿರಿಯ ಶಾಸಕರಿಂದ ಸಲಹೆ ಸೂಚನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.

ಕಾಂಗ್ರೆಸ್ ಶಾಸಕರಿಗೆ ಎದುರಾಗುತ್ತಿರುವ ಸಮಸ್ಯೆ, ಅಭಿವೃದ್ಧಿ ವಿಚಾರದಲ್ಲಿ ಎದುರಾಗಿರುವ ನಿರ್ಲಕ್ಷ್ಯ, ಅನುದಾನ ಕೊರತೆ, ಅನಗತ್ಯ ಹಸ್ತಕ್ಷೇಪ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾಹಿತಿ ಸಂಗ್ರಹಿಸಿರುವ ರಾಜ್ಯ ನಾಯಕರು, ಈ ವಿಚಾರವನ್ನೂ ಸದನದಲ್ಲಿ ಪ್ರಸ್ತಾಪಿಸಲು ತೀಮಾನಿಸಿದ್ದಾರೆ. ಇದರ ಜತೆ ಸಚಿವರಾದ ಆರ್. ಅಶೋಕ್, ಬಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ ಮತ್ತಿತರ ವಿರುದ್ಧ ಕೇಳಿ ಬಂದಿರುವ ಲಂಚ ಸ್ವೀಕಾರ ಆರೋಪವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆಯೂ ಒತ್ತಡ ಹೇರುವ ಸಂಬಂಧ ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ.

ಅಲ್ಲದೇ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿದ್ದ ಜಿಎಸ್​ಟಿ ಪಾಲನ್ನು ಕೇಳುವಲ್ಲಿ ಸಿಎಂ ವಿಫಲವಾಗಿದ್ದಾರೆ. ಕೇವಲ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿಯೇ ಪ್ರಯತ್ನ ನಡೆಸಿದ್ದಾರೆ. ಸರ್ಕಾರ ಸಮರ್ಥವಾಗಿ ಆಡಳಿತ ನಡೆಸುತ್ತಿಲ್ಲ. ಕೊರೊನಾ ವಿಚಾರದಲ್ಲಿಯೂ ನಿರ್ಲಕ್ಷ್ಯ ಮಾಡುತ್ತಿದೆ. ಕೊರೊನಾದಿಂದ ಮೃತಪಟ್ಟವರ ಲೆಕ್ಕ ಸರಿಯಾಗಿ ನೀಡುತ್ತಿಲ್ಲ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಆಗುತ್ತಿಲ್ಲ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟು ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಪ್ರತಿಪಕ್ಷ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ಮೂರು ಮಹಾನಗರ ಪಾಲಿಕೆ ಚುನಾವಣೆಯ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ನಾಯಕರು ನಾವು ಸಮರ್ಥವಾಗಿ ಆಡಳಿತ ಪಕ್ಷದ ಲೋಪವನ್ನು ಎತ್ತಿ ತೋರಿಸದಿದ್ದರೆ ಜನರ ನಂಬಿಕೆ, ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ವಿಶ್ವಾಸ ಗಳಿಸುವುದಕ್ಕಿಂತ ಕಳೆದುಕೊಳ್ಳುವುದು ಇನ್ನಷ್ಟು ಅಪಾಯಕಾರಿ. ಏನು ಕೆಲಸ ಮಾಡದಿದ್ದರೂ ಮುಂದಿನ ಚುನಾವಣೆಯಲ್ಲಿ ಇದು ಬಿಜೆಪಿಗೆ ವರದಾನವಾಗಿ ಲಭಿಸಲಿದೆ. ಇದರಿಂದ ಎಲ್ಲಾ ಒಟ್ಟಾಗಿ ಸರ್ಕಾರದ ತಪ್ಪನ್ನು ಎತ್ತಿ ಹಿಡಿದು ಜನರಿಗೆ ನಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕಿದೆ. ಇಲ್ಲವಾದರೆ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ವಿಧಾನಮಂಡಲ ಉಭಯ ಸದನಗಳಲ್ಲಿ ಈ ಸಾರಿ ಜನರ ಸಮಸ್ಯೆಯನ್ನೇ ದೊಡ್ಡ ವಿಚಾರವಾಗಿ ಪ್ರಸ್ತಾಪಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಹತ್ತು ಹಲವು ವಿಚಾರ ಮುಂದಿಟ್ಟು ಚರ್ಚೆಗೆ ನಿರ್ಧರಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಕಲಾಪದ ಮೊದಲ ದಿನ ಅಗಲಿದ ನಾಯಕರಿಗೆ ಸಂತಾಪ ಹಾಗೂ ನಂತರ ಸಿಎಂ ಬಸವರಾಜ ಬೊಮ್ಮಾಯಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಕಲಾಪ ಸಮಾವೇಶಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ, ಸ್ವಾಗತ ಕಾರ್ಯವಿದ್ದು ಒಂದೆರಡು ದಿನ ಕಲಾಪದ ಅವಧಿ ಕಳೆದುಹೋಗಲಿದೆ. ಇದರಿಂದ ನಂತರದ 8 ದಿನ ಯಾವುದೇ ರೀತಿ ಅನಗತ್ಯ ಗದ್ದಲ ಮಾಡದೇ, ಕಲಾಪದ ಅವಧಿಯನ್ನು ಚರ್ಚೆಗೆ ಬಳಸಿಕೊಳ್ಳಲು ತೀರ್ಮಾನಿಸಿದ್ದಾರೆ. ಇದರಿಂದ ಇಂದು ಇಲ್ಲವೇ ನಾಳೆ ಸಭೆ ಸೇರಿ ಹೇಗೆ, ಯಾವ ರೀತಿ ಸರ್ಕಾರವನ್ನು ಚರ್ಚೆಯಲ್ಲಿ ಕಟ್ಟಿಹಾಕಬೇಕೆಂಬ ಕುರಿತು ಚರ್ಚೆ ನಡೆಯಲಿದೆ. ಇದರ ಜತೆ ಯಾವ ನಾಯಕರು ಯಾವ ವಿಚಾರದ ಮೇಲೆ ಚರ್ಚಿಸಬೇಕೆಂಬ ಕುರಿತು ಸಹ ನಿರ್ಧಾರವಾಗಲಿದೆ. ಅತ್ಯಂತ ಅಚ್ಚುಕಟ್ಟಾಗಿ ಈ ಸಾರಿಯ ಕಲಾಪದ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ.

ABOUT THE AUTHOR

...view details