ಬೆಂಗಳೂರು : ನಾಲ್ಕು ವರ್ಷಗಳಿಂದ ಜನಸೇವೆ ಮಾಡದೆ, ತಲೆಮರೆಸಿಕೊಂಡು ಈಗ ಹಿಂದೂ ಧಾರ್ಮಿಕತೆ ಹಾಗೂ ಶ್ರೀ ರಾಮನ ಹೆಸರಿನಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಕೀಳುಮಟ್ಟದ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಂಸದ, ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಅನಂತ್ ಕುಮಾರ್ ಪ್ರತಿಕೃತಿ ದಹಿಸಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಶಾಂತಿ ಪುರುಷ ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯ ಕೆಲವರು ರಾಮನನ್ನು ರಾಜಕೀಯವಾಗಿ ಎಳೆದು ತರುತ್ತಿದ್ದಾರೆ. ಬಿಜೆಪಿಯವರು ಧಾರ್ಮಿಕ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಕೀಳುಮಟ್ಟದ ಅಭಿರುಚಿಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯದ ಕೋಟ್ಯಂತರ ಜನರ ಹಾಗೂ ಕನ್ನಡಿಗರ ಪ್ರತಿನಿಧಿಗಳು ಎಂದು ಹೇಳಿದರು.