ಬೆಂಗಳೂರು: ವಿಧಾನಸಭೆ ಚುನಾವಣೆಯ ಅಭೂತಪೂರ್ವ ಗೆಲುವಿನ ಬಳಿಕ ಇದೀಗ ಕಾಂಗ್ರೆಸ್ ದೃಷ್ಟಿ ಬಿಬಿಎಂಪಿ ಚುನಾವಣೆಯತ್ತ ನೆಟ್ಟಿದೆ. ವಿಧಾನಸಭೆ ಚುನಾವಣೆ ಗೆದ್ದ ಅಲೆಯಲ್ಲಿ ಬಿಬಿಎಂಪಿಯನ್ನು ಸಹ ಕೈವಶ ಮಾಡಿಕೊಳ್ಳುವ ಸಿದ್ಧತೆಯಲ್ಲಿರುವ ಕಾಂಗ್ರೆಸ್ ಆದಷ್ಟು ಬೇಗ ಚುನಾವಣೆ ಆದರೆ ಒಳಿತು ಎನ್ನುವ ದೃಷ್ಟಿಯಲ್ಲಿದೆ. ಯಾವುದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದ್ದು, ಸರ್ವ ರೀತಿಯಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಡಿ ಕೆ ಶಿವಕುಮಾರ್ ಸನ್ನದ್ಧರಾಗಿದ್ದಾರೆ.
ಇದರ ಭಾಗವಾಗಿಯೇ ಬೆಂಗಳೂರಿನ ಕೈ ಶಾಸಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಹತ್ವದ ಸಭೆ ಕರೆದಿದ್ದಾರೆ. ಸಂಜೆ ಆರು ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ನಡೆಯಲಿರುವ ಸಭೆ ಬಿಬಿಎಂಪಿ ಚುನಾವಣೆ ವಿಚಾರವಾಗಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ವಾರ್ಡ್ ಮರುವಿಂಗಡಣೆ, ಬಿಬಿಎಂಪಿ ವಿಭಜನೆ ಸಂಬಂಧ ಚರ್ಚೆ ಆಗಲಿದೆ. ಕಾಂಗ್ರೆಸ್ ಶಾಸಕರಿಂದ ಅಭಿಪ್ರಾಯ ಕೇಳಲಿರುವ ಡಿ.ಕೆ ಶಿವಕುಮಾರ್, ನವೆಂಬರ್ ವೇಳೆಗೆ ಪಾಲಿಕೆ ಚುನಾವಣೆ ನಡೆಯಬಹುದು ಎಂಬ ಮಾಹಿತಿ ಇರುವ ಹಿನ್ನೆಲೆ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು ನಗರದ ಒಳಚರಂಡಿ ವ್ಯವಸ್ಥೆ ಪರಿಶೀಲನೆ ನಡೆಸಲು ಒಂದು ಸುತ್ತು ನಗರ ಸಂಚಾರ ಮಾಡಿರುವ ಸಚಿವರು ಎರಡನೇ ಹಂತವಾಗಿ ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಹಾಗೂ ಕೆಆರ್ ಪುರದ ಟಿನ್ ಫ್ಯಾಕ್ಟರಿ ಸಮೀಪದ ಸಂಚಾರ ದಟ್ಟಣೆಯ ಪರಿಶೀಲನೆ ಸಹ ಮಾಡಿದ್ದಾರೆ. ಒಟ್ಟಾರೆ ಬೆಂಗಳೂರು ನಗರ ಸಚಿವರಾಗಿ ಬಿಬಿಎಂಪಿ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಡಿಕೆ ಶಿವಕುಮಾರ್ ತಮ್ಮ ನೇತೃತ್ವದಲ್ಲಿ ಯಶಸ್ವಿಯಾಗಿ ಪಾಲಿಕೆಯನ್ನು ಕೈವಶ ಮಾಡಿಕೊಳ್ಳುವ ತಯಾರಿಯಲ್ಲಿ ಇದ್ದಾರೆ.